ಹಲವು ದಿನಗಳಿಂದ ರಾಜ್ಯರಾಜಕಾರಣದಲ್ಲಿ ತಲೆದೋರಿದ್ದ ಬಿಕ್ಕಟ್ಟು ಶನಿವಾರದಂದು ನಡೆದ ನಾಟಕೀಯ ಬೆಳವಣಿಗೆ ಅಂತ್ಯಹಾಡಿದ್ದು,ಜೆಡಿಎಸ್ ಇದೀಗ ಭಾರತೀಯ ಜನತಾ ಪಕ್ಷಕ್ಕೆ ತನ್ನ ಬೆಂಬಲವನ್ನು ನೀಡುವುದರೊಂದಿಗೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಾದಿಗೆ ಏರುವುದು ಖಚಿತವಾಗಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಕೂಟ ಸರಕಾರದಲ್ಲಿ ಬಿ.ಎಸ್.ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.ನಂತರ ಅಧಿಕಾರ ಹಂಚಿಕೆ ವಿವಾದದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡು,ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.
ಈ ನೆಲೆಯಲ್ಲಿ ಜೆಡಿಎಸ್ ಶನಿವಾರ ಸಂಜೆ ಸರಕಾರ ರಚನೆಗೆ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪತ್ರ ನೀಡಿದೆ.ಈ ಸಂಬಂಧವಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಜತೆ ಮಾತುಕತೆ ನಡೆಸಿದ್ದಾರೆ.
ಬಿಜೆಪಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ಬೆಂಬಲ ಘೋಷಿಸಿದ ಬಳಿಕ ಬಿಜೆಪಿ ಕೇಂದ್ರ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದಾರೆ.
ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಸರಕಾರ ರಚನೆಯ ಕುರಿತು ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ,ನಾವು ಬಿಜೆಪಿಗೆ ಬೆಂಬಲ ನೀಡಿ ಸರಕಾರ ರಚಿಸುವುದಾಗಿ ತಿಳಿಸಿದರು.
ಆದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಮುಂದುವರಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.ಈ ನಿಟ್ಟಿನಲ್ಲಿ ಪರ್ಯಾಯ ಸರಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಕಾನೂನು ತಜ್ಞರ ಅಭಿಪ್ರಾಯ ಕೇಳಿ ಮುಂದುವರಿಯುವುದಾಗಿ ಹೇಳಿದ್ದಾರೆ.
|