ಸರ್ಕಾರ ರಚಿಸಲು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಜೆಡಿಎಸ್ ಘೋಷಿಸುವ ಮೂಲಕ ಕರ್ನಾಟಕದ ರಾಜಕೀಯ ಬೆಳವಣಿಗೆ ಮಹತ್ವದ ತಿರುವು ಪಡೆದುಕೊಂಡಿದೆ. ಬಿಜೆಪಿ ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಹಕ್ಕು ಪ್ರತಿಪಾದನೆ ಮಾಡಿದೆ.
ಮಾಜಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಡಿ.ವಿ. ಸದಾನಂದ ಗೌಡ ಮತ್ತು ಬಿಜೆಪಿಯ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಶನಿವಾರ ಮಧ್ಯಾಹ್ನ ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿ ಪತ್ರವನ್ನು ಸಲ್ಲಿಸಿದ್ದಾರೆ.
ಬಹುಮತದ ಶಾಸಕರ ಬೆಂಬಲ ತಮಗಿರುವುದಾಗಿ ಪತ್ರದಲ್ಲಿ ತಿಳಿಸಿರುವ ಬಿಜೆಪಿ ನಿಯೋಗ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಂಡು ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದೆ.
ಜೆಡಿಎಸ್-ಬಿಜೆಪಿ ಸರ್ಕಾರ ಪತನಗೊಂಡ ಬಳಿಕ ಅಮಾನತಿನಲ್ಲಿರುವ ರಾಜ್ಯವಿಧಾನಸಭೆಗೆ ಪುನರ್ಜೀವ ನೀಡಬೇಕೆಂದು ನಿಯೋಗ ಪತ್ರದಲ್ಲಿ ಕೋರಿಕೊಂಡಿದೆ. ನಿರ್ದಿಷ್ಟ ಕಾಲಾವಧಿಯಲ್ಲಿ ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು ಇಚ್ಛಿಸಿದರೆ ತಾವು ಸಾಬೀತುಮಾಡುವುದಾಗಿ ಯಡಿಯೂರಪ್ಪ ರಾಜ್ಯಪಾಲರಿಗೆ ತಿಳಿಸಿದರೆಂದು ತಿಳಿದುಬಂದಿದೆ.
ಬಿಜೆಪಿ ಹಕ್ಕುಪ್ರತಿಪಾದನೆಯನ್ನು ಗಟ್ಟಿಗೊಳಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಬಿಜೆಪಿಯನ್ನು ಬೆಂಬಲಿಸಿರುವ ಪತ್ರವನ್ನು ಕೊಟ್ಟಿದ್ದಾರೆ. ಕುಮಾರಸ್ವಾಮಿ ಮತ್ತು ರಾಜ್ಯಘಟಕದ ಅಧ್ಯಕ್ಷ ಮಿರಾಜುದ್ದೀನ್ ಪಟೇಲ್ ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡುವಂತೆ ರಾಷ್ಟ್ರಪತಿಗೆ ಬರೆದಿರುವ ಇನ್ನೊಂದು ಪತ್ರವನ್ನು ಕೂಡ ಸಲ್ಲಿಸಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿ ನಾನು ಯಡಿಯೂರಪ್ಪ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇನೆಂದು ಕುಮಾರಸ್ವಾಮಿ ತಿಳಿಸಿದ್ದು, ಎಲ್ಲ 58 ಶಾಸಕರು ತಮಗೆ ಬೆಂಬಲವಿದ್ದಾರೆಂದು ಘೋಷಿಸಿದ್ದಾರೆ.
|