ಕರ್ನಾಟಕ ರಾಜ್ಯರಾಜಕಾರಣದಲ್ಲಿ ಬಂಡಾಯ ಅಲೆ ಎದ್ದಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ರಚನೆಗೆ ಬೆಂಬಲ ನೀಡಿರುವುದಕ್ಕೆ ವಿರುದ್ಧವಾಗಿ ಜೆಡಿಎಸ್‌ನ ಹಿರಿಯ ಮುಖಂಡ,ಮಾಜಿ ಗೃಹ ಸಚಿವ ಎಂ.ಪಿ.ಪ್ರಕಾಶ್ ಅವರು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭಾನುವಾರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ಎಂ.ಪಿ.ಪ್ರಕಾಶ್ ಅವರು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿದ ಬಳಿಕ,ರಾಜಭವನಕ್ಕೆ ತೆರಳಿದ ಎಂ.ಪಿ.ಅವರು ಠಾಕೂರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಆದರೆ ಮಾತುಕತೆಯ ವಿವರ ಬಹಿರಂಗಪಡಿಸಿಲ್ಲ.
ಆದರೆ ಏಕಾಏಕಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದು ಬಿಜೆಪಿಗೆ ಬೆಂಬಲ ನೀಡುವುದಾಗಿ ನಿರ್ಣಯ ಕೈಗೊಂಡಿರುವುದನ್ನು ಎಂ.ಪಿ.ಪ್ರಕಾಶ್ ತೀವ್ರ ಖಂಡಿಸಿದರು.
ಆದರೆ ಎಂ.ಪಿ.ಪ್ರಕಾಶ್ ಜೆಡಿಎಸ್ ಶಾಸಕಾಂಗ ಪಕ್ಷದ ಸದಸ್ಯರಾಗಿದ್ದಾರೆ.ಈ ನಿಟ್ಟಿನಲ್ಲಿ ಏಕಾಏಕಿ ಕರೆದ ಸ್ವಯಂಘೋಷಿತ ಸಭೆಗೆ ಪಕ್ಷದ ಕೆಲವು ಶಾಸಕರನ್ನು ಯಾಕೆ ಕರೆದಿಲ್ಲ ಎಂಬುದಾಗಿ ಪ್ರಕಾಶ್ ಖಾರವಾಗಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮರುಮೈತ್ರಿಯ ಸರಕಾರ ರಚನೆಗೆ ಬೆಂಬಲ ನೀಡಿ ರಾಜ್ಯಪಾಲರಿಗೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಅಧ್ಯಕ್ಷ ಮೆರಾಜುದ್ದೀನ್ ಪಟೇಲ್ ನೀಡಿರುವ ಪತ್ರದಲ್ಲಿ ಅವಧಿಯ ಬಗ್ಗೆ ಪ್ರಶ್ನಿಸಲಾಗಿದೆ.ಆ ನೆಲೆಯಲ್ಲಿ ಪ್ರಕಾಶ್ ಅವರು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ.
ಎಂ.ಪಿ.ಪ್ರಕಾಶ್ ಅವರು ಭವಿಷ್ಯದ ಯೋಜನೆಯ ಕುರಿತಾಗಿ ಭಾನುವಾರ ಅಥವಾ ಸೋಮವಾರ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದರೊಂದಿಗೆ ದೇವೇಗೌಡರ ಕುತಂತ್ರ ರಾಜಕಾರಣಕ್ಕೆ ಮತ್ತೊಬ್ಬ ಹಿರಿಯ ರಾಜಕಾರಣಿ ಎಂ.ಪಿ.ಪ್ರಕಾಶ್ ಬಲಿಪಶುವಾಗುವುದರೊಂದಿಗೆ ಜೆಡಿಎಸ್ ಮತ್ತೆ ಹೋಳಾಗುವ ಹಾದಿಯತ್ತ ಹೋಗುತ್ತಿರುವುದು ಸ್ಪಷ್ಟವಾಗಿದೆ.
|