ಜೆಡಿಎಸ್ ಅಧಿನಾಯಕ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ವಿಧಾನಪರಿಷತ್ ಸದಸ್ಯ ಜನಾರ್ದನ ರೆಡ್ಡಿ ತಮ್ಮ ಬಾಯಿಗೆ ಅನಿವಾರ್ಯವಾಗಿ ಬೀಗ ಹಾಕಿಕೊಳ್ಳಲೇ ಬೇಕಾದ ಪರಿಸ್ಥಿತಿ ಬಂದಿದೆ.
ಎಲ್ಲಿ ಹೋದರೂ ದೇವೇಗೌಡ ಹಾಗೂ ಅವರ ಪುತ್ರ ಕುಮಾರಸ್ವಾಮಿ ಅವರ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದ ಜನಾರ್ದನ ರೆಡ್ಡಿ ಇನ್ನುಮುಂದೆ ಆ ರೀತಿ ಮುಂದುವರೆಯದಂತೆ ಬಿಜೆಪಿ ಹಿರಿಯರು ಆದೇಶ ನೀಡಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವ ಶ್ರೀರಾಮುಲು ಅವರಿಗೂ ಇದೇ ರೀತಿ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಒಬ್ಬರ ಮೇಲೆ ಮತ್ತೊಬ್ಬರು ಕತ್ತಿ ಮಸಿಯುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮರು ಮೈತ್ರಿ ಮಾಡಿಕೊಂಡು ಅಧಿಕಾರ ಚುಕ್ಕಾಣಿ ಹಿಡಿಯಲು ವೇದಿಕೆ ಸಜ್ಜಾಗಿದೆ.
ಬಳ್ಳಾರಿ ಮುಖಂಡರ ವಿರುದ್ಧ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಹುರಿದುಬಿದ್ದು ಅಧಿಕಾರ ಹಸ್ತಾಂತರಿಸದಿರಲು ಅದೂ ಒಂದು ಕಾರಣ ಎಂದು ಹೇಳುತ್ತಿದ್ದರು.
ಅದೇ ಪರಿಸ್ಥಿತಿ ಮರುಕಳಿಸಿದರೆ ಅಧಿಕಾರ ಹಸ್ತಾಂತರಕ್ಕೆ ಮತ್ತೆ ಕೊಕ್ಕೆ ಬೀಳಬಹುದು ಎಂಬುದು ಬಿಜೆಪಿ ನಾಯಕರ ಭೀತಿ. ಜನಾರ್ದನರೆಡ್ಡಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಗೆ ದೇವೇಗೌಡರೇ ಕಾರಣ ಎಂದು ರೆಡ್ಡಿ ಆಪಾದಿಸಿದ್ದರು.
|