ಜೆಡಿಎಸ್ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ನಾಯಕ ಎಂ.ಪಿ.ಪ್ರಕಾಶ್ ಅವರನ್ನು ಒಲಿಸಿಕೊಳ್ಳುವ ಎಲ್ಲ ಪ್ರಯತ್ನಗಳು ಸೋಮವಾರ ವಿಫಲವಾಗಿದ್ದು ಬಂಡಾಯದ ಬಿಸಿ ತಾರಕಕ್ಕೇರಿದೆ.
ಜೆಡಿಎಸ್-ಬಿಜೆಪಿ ಸರ್ಕಾರ ರಚನೆಗೆ ಕಂಟಕವಾಗಿರುವ ಈ ಬಿಕ್ಕಟ್ಟು ಶಮನದ ಸಲುವಾಗಿ ಮಾಜಿ ಸಾರಿಗೆ ಸಚಿವ ಎನ್. ಚೆಲುವರಾಯ ಸ್ವಾಮಿ ಅವರು ಪ್ರಕಾಶ್ ಅವರನ್ನು ಭೇಟಿ ಮಾಡಿ ಎರಡು ಸುತ್ತು ಮಾತುಕತೆ ನಡೆಸಿದರು.ಚೆಲುವರಾಯಸ್ವಾಮಿ ಅವರು ಜೆಡಿಎಸ್ ಮುಖಂಡ ದೇವೇಗೌಡ ಅವರ ಹಿರಿಯ ಪುತ್ರ ಎಚ್.ಡಿ. ಬಾಲಕೃಷ್ಣ ಅವರ ಜತೆ ಈ ಪ್ರಯತ್ನದಲ್ಲಿ ಜತೆಗೂಡಿದ್ದರು.
ಆದರೆ ಪ್ರಕಾಶ್ ಅವರನ್ನು ಮನವೊಲಿಸುವ ಎಲ್ಲ ಪ್ರಯತ್ನಗಳು ವಿಫಲವಾದವು. ಪ್ರಕಾಶ್ ಅವರು ಮುರಿದು ಬಿದ್ದ ದಾಂಪತ್ಯವನ್ನು ಪುನಃ ಒಂದುಮಾಡುವ ಜೆಡಿಎಸ್ ಪ್ರಯತ್ನವನ್ನು ವಿರೋಧಿಸುವ ನಿಲುವಿಗೆ ಬಿಗಿಯಾಗಿ ಅಂಟಿಕೊಂಡಿದ್ದರಿಂದ ಮಾತುಕತೆ .ಯಾವುದೇ ಫಲ ನೀಡದೇ ವಿಫಲವಾಯಿತು.
ಬಿಜೆಪಿ-ಜೆಡಿಎಸ್ ಕೂಟಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಬಾರದೆಂಬ ವಿಚಾರವನ್ನು ರಾಜ್ಯಪಾಲರ ಎದುರು ಮಂಡಿಸಿ ಅದರ ಸಾಧಕ-ಬಾಧಕಗಳನ್ನು ರಾಜ್ಯಪಾಲರಿಗೆ ಮನದಟ್ಟು ಮಾಡಲು ಪ್ರಕಾಶ್ ನಿರ್ಧರಿಸಿದ್ದಾರೆಂದು ಮೂಲಗಳು ಹೇಳಿವೆ.
ಈಗಾಗಲೇ ರಾಜ್ಯವನ್ನು ಆಳಿರುವ ಜೆಡಿಎಸ್-ಬಿಜೆಪಿ ಒಕ್ಕೂಟದ ಮೈತ್ರಿ ಮುರಿದುಬಿದ್ದಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಪುನಃ ಅವಕಾಶ ನೀಡಬಾರದೆಂದು ಪ್ರಕಾಶ್ ಅವರ ಜೆಡಿಎಸ್ ಬಣ ರಾಜ್ಯಪಾಲರನ್ನು ಒತ್ತಾಯಿಸುವುದೆಂದು ನಿರೀಕ್ಷಿಸಲಾಗಿದೆ.
ಎಸ್. ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಸಕ್ತ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಎಂದು ರಾಜ್ಯಪಾಲರ ಗಮನಕ್ಕೆ ತರಲು ಕೂಡ ಪ್ರಕಾಶ್ ಬಣ ನಿರ್ಧರಿಸಿದೆ.
|