ರಾಜ್ಯದಲ್ಲಿ ಎರಡನೇ ಇನ್ನಿಂಗ್ಸ್ಗೆ ಸಜ್ಜಾಗುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಈ ಬಾರಿ ಪರಸ್ಪರ ಆರೋಪಕ್ಕೆ ಅವಕಾಶವಿಲ್ಲದಂತೆ ಲಿಖಿತ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ.
ಹೊಸ ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಬರಬಾರದು ಹಾಗೂ ಎಲ್ಲವೂ ಆರಂಭದಲ್ಲೇ ಇತ್ಯರ್ಥವಾಗಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಅವರ ಉದ್ದೇಶ.
ಈ ಒಪ್ಪಂದದ ಕರಡು ಪ್ರತಿಯೂ ಸಿದ್ಧವಾಗಿದೆಯಂತೆ. ಹೊಸ ಮೈತ್ರಿ ಸರ್ಕಾರದಲ್ಲೂ ಎಚ್.ಡಿ.ರೇವಣ್ಣ ಲೋಕೋಪಯೋಗಿ ಹಾಗೂ ಇಂಧನ ಖಾತೆಯನ್ನೇ ನಿರ್ವಹಿಸುತ್ತಾರೆ. ನೀರಾವರಿ ಖಾತೆ ಬಿಜೆಪಿಗೆ ಬಿಟ್ಟುಕೊಡಬೇಕು. ವಿಧಾನಸಭೆ ಸಭಾಧ್ಯಕ್ಷ ಸ್ಥಾನವನ್ನು ಜೆಡಿಎಸ್ ಉಳಿಸಿಕೊಳ್ಳಬಹುದು. ಅದಕ್ಕೆ ಬದಲಾಗಿ ವಿಧಾನಪರಿಷತ್ತಿನ ಸಭಾಪತಿ ಹುದ್ದೆಯನ್ನು ಬಿಜೆಪಿಗೆ ಬಿಟ್ಟುಕೊಡಬೇಕು.
ಎರಡು ಪಕ್ಷಗಳಿಂದ ಮೂವರನ್ನು ಒಳಗೊಂಡ ಸಮನ್ವಯ ಸಮಿತಿ ರಚನೆ ಯಾಗುತ್ತದೆ. ರಾಜ್ಯದಲ್ಲಿ ಕೋಮು ಸೌಹಾರ್ದ ಕಾಪಾಡಲು ಎರಡು ಪಕ್ಷಗಳು ಬದ್ಧವಾಗಿರಬೇಕು. ಎರಡು ಪಕ್ಷಗಳು ನಡುವೆ ಆಗಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಧಾರವಾಗಿ ಆಡಳಿತ ನಡೆಯಬೇಕು. ಬಳ್ಳಾರಿ ಮುಖಂಡರ ಬಗ್ಗೆಯೂ ಜೆಡಿಎಸ್ ಎಚ್ಚರ ವಹಿಸಿದೆ. ಇನ್ನುಮುಂದೆ ಬಿಜೆಪಿಯ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಜೆಡಿಎಸ್‌ನ್ನು ಟೀಕಿಸುವಂತಿಲ್ಲ.
ಹಾಗೆ ಜೆಡಿಎಸ್ ಸಹಾ ಬಳ್ಳಾರಿ ವ್ಯವಹಾರಗಳಲ್ಲಿ ಮೂಗು ತೂರಿಸುವಂತಿಲ್ಲ. ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಅಂತಿಮ. ಇವಿಷ್ಟೂ ಎರಡು ಪಕ್ಷಗಳ ನಡುವೆ ಆಗಿರುವ ಒಪ್ಪಂದಗಳು.
|