ತಾವು ಕರ್ನಾಟಕ ರಾಜಕೀಯ ವಿದ್ಯಮಾನಗಳಲ್ಲಿ ಭಾಗಿಯಾಗಿಲ್ಲ, ತಮ್ಮ ಮೇಲೆ ಜೆಡಿಎಸ್ ವರಿಷ್ಠ ದೇವೇಗೌಡರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಮಹಾರಾಷ್ಟ್ತ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ತಾವು ಯಾವ ರಾಜಕಾರಣಿಯೊಂದಿಗೆ ಅಥವಾ ರಾಜಕೀಯ ಸಭೆಗಳಲ್ಲಿ ಮಾತನಾಡಿಲ್ಲ.ತಮಗೆ ನೀತಿ ಹೇಳುವ ವ್ಯಕ್ತಿಗಳ ವರ್ಚಸ್ಸೇ ಸಂಶಯದಲ್ಲಿ ಇರುವಾಗ ಅವರು ತಮ್ಮ ಮೇಲೆ ನಿರಾಧಾರ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯ ಅಯೋಮಯ ಪರಿಸ್ಥಿತಿ ನಿರ್ಮಾಣವಾದ ಈ ಸಂದರ್ಭದಲ್ಲಿ ಮಹಾರಾಷ್ಟ್ತ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ಬೆಂಗಳೂರಿಗೆ ತಮ್ಮ ಪಕ್ಷವನ್ನು ಒಡೆಯಲು ಆಗಮಿಸಿದ್ದಾರೆ ಎಂದು ದೇವೇಗೌಡರು ಆರೋಪಿಸಿದ್ದರು.
ಕೃಷ್ಣ ಅವರು ಪದೇ ಪದೇ ರಾಜ್ಯಕ್ಕೆ ಏಕೆ ಬರುತ್ತಿದ್ದಾರೆ, ಜೆಡಿಎಸ್ ಒಡೆಯುವುದೇ ಅವರ ಉದ್ದೇಶ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದರು.ಪಕ್ಷವನ್ನುಳಿಸುವ ಉದ್ದೇಶದಿಂದ ನಾವು ಅನಿವಾರ್ಯವಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬೇಕಾಯಿತು ಎಂದು ಅವರು ಹೇಳಿದ್ದರು.
ಕೃಷ್ಣ ಅವರು ಪದೇ ಪದೇ ಬೆಂಗಳೂರಿಗೆ ಏಕೆ ಬರುತ್ತಿದ್ದಾರೆ ಎಂದು ಅವರ ಪಕ್ಷದವರೇ ಆದ ರೋಷನ್ ಬೇಗ್ ಅವರು ಪ್ರಶ್ನಿಸಿದ್ದನ್ನು ದೇವೇಗೌಡರು ಉಲ್ಲೇಖಿಸಿದ್ದರು.
|