ರಾಜಕೀಯ ದೊಂಬರಾಟದಲ್ಲಿ ಬಲಿಪಶುವಾದ ಹಿರಿಯ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರ ಮನವೊಲಿಸಲು ಜೆಡಿಎಸ್ ಮುಖಂಡರು ಹೆಣಗಾಡುತ್ತಿದ್ದಾರೆ. ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚನೆಗೆ ಗ್ರೀನ್ ಸಿಗ್ಪ್ನಲ್ ತೋರಿ ತಕ್ಷಣ ಬಿಜೆಪಿ ಜತೆ ಸೇರಿ ಸರ್ಕಾರ ರಚನೆಗೆ ಮುಂದಾದ ಜೆಡಿಎಸ್ ಮುಖಂಡರ ವರ್ತನೆಗೆ ಎಂ.ಪಿ.ಪ್ರಕಾಶ್ ರೋಸಿಹೋಗಿದ್ದಾರೆ.
ಎಂ.ಪಿ.ಪ್ರಕಾಶ್ ಪಕ್ಷವನ್ನು ತೊರೆದರೆ ಅದರ ಪರಿಣಾಮ ಪಕ್ಷದ ಮೇಲೇ ಬೀಳಬಹುದು ಎಂದು ಭೀತಿ ಹೊಂದಿರುವ ಕುಮಾರಸ್ವಾಮಿ ಇಂದು ಎಂ.ಪಿ.ಪ್ರಕಾಶ್ ಅವರ ಮನೆಗೆ ಬುಧವಾರ ತೆರಳಿ ಅವರ ಮನವೊಲಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.
ತೀರ್ಥಯಾತ್ರೆಯಲ್ಲಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಇಂದು ಸಂಜೆ ಎಂ.ಪಿ.ಪ್ರಕಾಶ್ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸುವ ಸಂಭವವಿದೆ. ಆಂಧ್ರದ ಕರ್ನೂಲು ಜಿಲ್ಲೆಯಲ್ಲಿರುವ ಅಹೋಬಿಲಂನ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ದೇವೇಗೌಡರು ಪೂಜೆ ಸಲ್ಲಿಸುವಲ್ಲಿ ನಿರತರಾಗಿದ್ದಾರೆ. ಎಂ.ಪಿ.ಪ್ರಕಾಶರೊಂದಿಗೆ ಕುಮಾರಸ್ವಾಮಿ ಅವರು ಮಾತಕತೆ ನಡೆಸಿರುವುದು ಇದು ಮೂರನೆ ಬಾರಿ.
ಕುಮಾರಸ್ವಾಮಿ ಅವರ ಜತೆ ಮಾಜಿ ಸಚಿವ ಚೆಲುರಾಯಸ್ವಾಮಿ ಹಾಗೂ ಮೆರಾಜುದ್ದೀನ್ ಪಟೇಲ್ ಅವರೂ ಸಹಾ ಪ್ರಕಾಶ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು.
ಇಷ್ಟು ದಿನ ಸಾರ್ವಜನಿಕ ಜೀವನದಲ್ಲಿರುವ ಎಂ.ಪಿ.ಪ್ರಕಾಶ್ ಅವರು ಏನು ನಿರ್ಣಯ ಕೈಗೊಳ್ಳಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ.
|