ಬಿಜೆಪಿ-ಜೆಡಿಎಸ್ ನೇತೃತ್ವದ ಹೊಸ ಸರ್ಕಾರ ರಚನೆ ನಿರ್ಧಾರಕ್ಕೆ ಇನ್ನೂ ಎರಡು ದಿನವಾದರೂ ಕಾಯಲೇಬೇಕಾಗಿದೆ.
ಗುರುವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಕರ್ನಾಟಕದಲ್ಲಿ ಸರ್ಕಾರ ರಚಿಸುವ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ.
ಚರ್ಚೆ ಯಾಗದಿದ್ದರೆ ಸರ್ಕಾರ ರಚನೆಯಲ್ಲಿ ಇನ್ನಷ್ಟು ವಿಳಂಬವಾಗಲಿದೆ. ನ. 15ರಂದು ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಅಂತಿಮ ನಿರ್ಧಾರ ಹೊರಬೀಳಬಹುದು. ಸರ್ಕಾರ ರಚನೆಗೆ ತಮ್ಮನ್ನು ಆಹ್ವಾನಿಸುವಂತೆ ಮನವಿ ಮಾಡಲು ರಾಜ್ಯಪಾಲರನ್ನು ಬಿಜೆಪಿ ಮುಖಂಡರು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ರಾಜ್ಯಪಾಲರು ಇನ್ನೂ ಎರಡು ಮೂರು ದಿನ ಕಾಯುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಸರ್ಕಾರ ರಚಿಸಲು ತಮ್ಮ ಶಾಸಕರ ಬಲಾಬಲವನ್ನು ರಾಜ್ಯಪಾಲರೆದುರು ಪ್ರದರ್ಶಿಸಿದ ಪಕ್ಷಗಳ ಆತಂಕ ಇನ್ನೂ ದೂರವಾಗಿಲ್ಲ ಎನ್ನುವುದಂತೂ ನಿಶ್ಚಿತ. ರಾಜಭವನ ಚಲೋ ಕಾರ್ಯಕ್ರಮ ನಡೆಸುವ ಮೂಲಕ ರಾಜ್ಯಪಾಲರ ಮೇಲೆ ಒತ್ತಡ ತರಲು ನಿರ್ಧರಿಸಿದ ಬಿಜೆಪಿ ನಂತರ ಆ ಕಾರ್ಯಕ್ರಮವನ್ನು ರದ್ದುಪಡಿಸಿದೆ.
ರಾಜ್ಯದಲ್ಲಿನ ಬೆಳವಣಿಗೆಗಳನ್ನು ವಿವರಿಸಿ ಕೂಡಲೇ ಸರ್ಕಾರ ರಚಿಸಲು ಆಹ್ವಾನಿಸುವಂತೆ ಕೋರಿ ಬುಧವಾರ ರಾಷ್ಟ್ತ್ರಪತಿ ಪ್ರತಿಭಾ ಪಾಟೀಲ್ ಹಾಗೂ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ಬಿಜೆಪಿ ನಿರ್ಧರಿಸಿದೆ.
ಸೋಮವಾರ ಶಾಸಕರ ಪರೇಡ್ ನಡೆಸಿದನಂತರ ಸಂಖ್ಯಾಬಲದ ಬಗ್ಗೆ ರಾಜ್ಯಪಾಲರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಕೇಂದ್ರಕ್ಕೆ ವರದಿ ಕಳುಹಿಸುವುದಾಗಿ ರಾಜ್ಯಪಾಲರು ಹೇಳಿದ್ದಾರೆ.
ಅದರಿಂದ ರಾಜಭವನದ ಬಳಿ ಪ್ರತಿಭಟನೆ ನಡೆಸುವುದು ಉಚಿತವಲ್ಲ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಮಾತನ್ನು ಬಿಜೆಪಿ ಗಂಭೀರವಾಗ ಪರಿಗಣಿಸಿದ್ದಾರೆ.
ನಂತರ ರಾಜಭವನ ಚಲೋ ಕಾರ್ಯಕ್ರಮವನ್ನು ರದ್ದುಪಡಿಸಿ ಗಾಂಧಿ ಪ್ರತಿಮೆ ಬಳಿ ಪಕ್ಷದ ರ್ಯಾಲಿಯನ್ನು ನಡೆಸಲು ನಿರ್ಧರಿಸಲಾಗಿದೆ.
|