ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಕೊನೆಯಾಗುವ ಕಾಲ ಸಮೀಪಿಸಿದಂತೆ ಕಾಣುತ್ತದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಬುಧವಾರ ರಾತ್ರಿ ನಡೆದ ಕಾಂಗ್ರೆಸ್ ಉನ್ನತ ಮಟ್ಟದ ಸಭೆಯ ಮೂಲಗಳ ಪ್ರಕಾರ ಇದು ನಿಜ.
ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಬುಧವಾರ ಸಂಜೆ ರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ರವಾನಿಸಿದ್ದಾರೆ.
ಈ ವರದಿಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬುಧವಾರ ರಾತ್ರಿ ಕಾಂಗ್ರೆಸ್ ಉನ್ನತ ಸಮಿತಿ ಸಭೆ ನಡೆಯಿತು. ಈ ಸಭೆಯ ಅಭಿಪ್ರಾಯಗಳನ್ನು ಅನುಸರಿಸಿ ಗುರುವಾರ ಬೆಳಗ್ಗೆ ಅಥವಾ ಸಂಜೆ ಕೇಂದ್ರ ಸಚಿವ ಸಂಪುಟ ಸಭೆ ನಡೆದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ರಾಜ್ಯಪಾಲರು 18 ಪುಟಗಳ ವರದಿಯನ್ನು ಕಳುಹಿಸಿದ್ದಾರೆ.
ಇದರಲ್ಲಿ ವಿವಿಧ ರಾಜಕೀಯ ನಾಯಕರ ಪತ್ರಗಳು, ಪತ್ರಿಕಾ ತುಣುಕುಗಳು, ದಾಖಲೆಗಳು ಇವೆ. ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆಗೆ ಅಥವಾ ವಿಧಾನಸಭೆ ವಿಸರ್ಜನೆಗೆ ವಿಸರ್ಜನೆಗೆ ಶಿಫಾರಸು ಮಾಡಿಲ್ಲ.
ಜೆಡಿಎಸ್‌ನಿಂದ ಬಿಜೆಪಿಗೆ ಹಸ್ತಾಂತರವಾಗದ ಅಧಿಕಾರ ಹಾಗೂ ಅದಕ್ಕೆ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ವಿಧಾನಸಭೆ ವಿಸರ್ಜನೆಗೆ ಪ್ರತಿಪಕ್ಷಗಳು ಮನವಿ ಮಾಡಿರುವುದನ್ನು ಸೇರಿಸಲಾಗಿದೆ.
ಜೆಡಿಎಸ್‌ನ ಪತ್ರಿಕಾ ಜಾಹೀರಾತುಗಳಲ್ಲಿನ ಆರೋಪ-ಪ್ರತ್ಯಾರೋಪ, ವಿಧಾನಸಭೆ ವಿಸರ್ಜನೆಗೆ ದೇವೇಗೌಡರ ಲಿಖಿತ ಮನವಿ, 20 ದಿನಗಳ ನಂತರ ಮತ್ತೆ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಯಡ್ಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಮುಂದಾಗಿರುವುದನ್ನು ವರದಿಯಲ್ಲಿ ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಕುರಿತ ಕಾನೂನು ಸಂಬಂಧಿತ ವಿಷಯಗಳನ್ನು ಮತ್ತು ಶಿಫಾರಸುಗಳನ್ನು ಒಳಗೊಂಡ ಮತ್ತೊಂದು ವರದಿಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಕಳುಹಿಸಲಿದ್ದಾರೆ.
|