ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆಗೆ ಅವಕಾಶ ಕೊಡಬೇಕೇ ಅಥವಾ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಅವಕಾಶ ಮಾಡಿಕೊಡಬೇಕೇ ಎಂದು ನಿರ್ಧರಿಸುವ ಅಂತಿಮ ವರದಿಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಶುಕ್ರವಾರ ಸಂಜೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.
ರಾಜ್ಯ ವಿದ್ಯಮಾನಗಳ ಕುರಿತು ಈಗಾಗಲೇ ರಾಜ್ಯಪಾಲರು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವುದು ಹಾಗೂ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯ ಹೇರುತ್ತಿರುವುದರ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿರುವ ಜೆಡಿಎಸ್ ಹಾಗೂ ಬಿಜೆಪಿ ಆತಂಕ ಎದುರಿಸುತ್ತಿವೆ.
ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕ ಧೋರಣೆಯನ್ನು ತಳೆದರೆ ಇನ್ನೊಂದೆರಡು ದಿನದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯವಾಗಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲಿದೆ.
ರಾಜ್ಯಪಾಲರ ವರದಿ ಪರಿಶೀಲನೆ, ಅದನ್ನು ಕುರಿತ ಸಾಂವಿಧಾನಿಕ ಚರ್ಚೆ, ಸುಪ್ರೀಂಕೋರ್ಟ್ ಸಲಹೆ ಮುಂತಾದ ಕ್ರಮಗಳಿಂದ ರಾಷ್ಟ್ರಪತಿ ಆಡಳಿತವನ್ನು ಅಂತ್ಯಗೊಳಿಸುವಲ್ಲಿ ಕೇಂದ್ರ ಸರ್ಕಾರ ಇನ್ನೂ ವಿಳಂಬ ತಂತ್ರವನ್ನು ಅನುಸರಿಸಬಹುದು ಇಲ್ಲವೇ ವಿಧಾನಸಭೆ ವಿಸರ್ಜಿಸಬಹುದು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಉನ್ನತ ಸಮಿತಿ ಸಭೆಯಲ್ಲಿ ಯಾವುದೇ ನಿಶ್ಚಿತ ನಿರ್ಧಾರ ಕೈಗೊಳ್ಳದಿದ್ದರೂ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂಬ ಒಲವು ವ್ಯಕ್ತವಾಗಿದೆ.
|