ಅಣು ಒಪ್ಪಂದಕ್ಕೆ ಸಂಬಂಧಿಸಿ ಎಡಪಕ್ಷಗಳು ಹಾಗೂ ಪ್ರತಿಪಕ್ಷಗಳ ನಡುವೆ ಸಿಲುಕಿ ಒದ್ದಾಡುತ್ತಿರುವ ಕೇಂದ್ರ ಸರ್ಕಾರ ಪತನಗೊಂಡು ಲೋಕಸಭೆ ವಿಸರ್ಜನೆಯಾದರೆ ರಾಜ್ಯ ವಿಧಾನಸಭೆಯನ್ನೂ ವಿಸರ್ಜಿಸಬೇಕು ಎಂಬ ಜೆಡಿಎಸ್ ವರಿಷ್ಠ ದೇವೇಗೌಡರ ಷರತ್ತಿನ ಬಗ್ಗೆ ಬಿಜೆಪಿ ರಾಜ್ಯ ಮುಖಂಡರು ತಲೆಕೆಡಿಸಿಕೊಂಡಿದ್ದಾರೆ.
ಸುಖ ಸರ್ಕಾರಕ್ಕೆ ಗೌಡರು ವಿಧಿಸಿರುವ 12 ಸೂತ್ರಗಳಲ್ಲಿ ಇದು ಪ್ರಮುಖವಾದುದು. ಲೋಕಸಭೆ ಚುನಾವಣೆ ಜತೆಗೆ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆದರೆ ಪಕ್ಷದ ಪರವಾಗಿ ಪ್ರಚಾರ ಸುಲಭವಾಗುತ್ತದೆ.
ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ ಒಳ್ಳೆಯ ಹೆಸರು ಕೂಡ ಜೆಡಿಎಸ್‌ಗೆ ದೊರೆಯುತ್ತದೆ ಎಂಬುದು ದೇವೇಗೌಡರ ಲೆಕ್ಕಾಚಾರ. 12 ಅಂಶಗಳ ಒಪ್ಪಂದ ಕರಡು ಪ್ರತಿಗೆ ಬಿಜೆಪಿ ವರಿಷ್ಠರು ಅನುಮೋದಿಸಿದರೆ ನಂತರ ಮುಖ್ಯಮಂತ್ರಿ ಗಾದಿಗೆ ಬರಲಿರುವ ಯಡ್ಯೂರಪ್ಪ ಹಾಗೂ ಉಭಯಪಕ್ಷಗಳ ಸಮನ್ವಯ ಸಮಿತಿಯ ಸಂಭವನೀಯ ಅಧ್ಯಕ್ಷ ಕುಮಾರಸ್ವಾಮಿ ಸಹಿ ಹಾಕಲಿದ್ದಾರೆ.
ಅಧಿಕಾರ ಕೊಟ್ಟಹಾಗೆ ಮಾಡಿ ಯಾವುದೇ ನೆಪ ಒಡ್ಡಿ ಅಧಿಕಾರ ಹಿಂಪಡೆಯುಯಲು ಅನುಕೂಲವಾಗುವ ಅನೇಕ ಅಂಶಗಳೂ ಈ ಷರತ್ತುಗಳಲ್ಲಿ ಅಡಗಿವೆ.
ಒಪ್ಪಂದದಲ್ಲಿರುವ ಯಾವುದೇ ಅಂಶವನ್ನು ಅನುಷ್ಠಾನಗೊಳಿಸಲು ಅಸಾಧ್ಯವಾಗಿ ಉತ್ತಮ ಆಡಳಿತನೀಡುವಲ್ಲಿ ವಿಫಲವಾದರೆ ಸಮನ್ವಯ ಸಮಿತಿಯೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದರೆ ಒಂದು ಅಂಗ ಪಕ್ಷ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವಾಪಸ್ ತೆಗೆದುಕೊಳ್ಳಬಹುದು ಎಂಬ ಷರತ್ತು ಗೌಡರ ತಂತ್ರದ ಸಂಪೂರ್ಣ ಉದ್ದೇಶವನ್ನು ಹೇಳಿಬಿಡುತ್ತದೆ.
|