ಕರ್ನಾಟಕದಲ್ಲಿ ರಾಜಕೀಯ ಬೆಳವಣಿಗೆಗಳು ದಿನದಿನಕ್ಕೂ ಬದಲಾವಣೆಯಾಗುತ್ತಿದ್ದು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ವಿಷಯದಲ್ಲಿ ತಕ್ಷಣದ ನಿರ್ಧಾರ ಕೈಗೊಳ್ಳುವ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲವೆಂದು ತಿಳಿದುಬಂದಿದೆ.
ಜೆಡಿಎಸ್ ವರಿಷ್ಠರಾದ ದೇವೇಗೌಡರು ಬಿಜೆಪಿ ಜತೆ ಮರುಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಹೊಸ ಷರತ್ತುಗಳನ್ನು ವಿಧಿಸಿರುವುದು ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿದೆ. ದೇವೇಗೌಡರು ಸುಖಸಂಸಾರಕ್ಕೆ ಮಂಡಿಸಿರುವ ಸೂತ್ರಗಳು ಬಿಜೆಪಿ ಪಾಳೆಯಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.
ಅದರಲ್ಲೂ ಕೇಂದ್ರದಲ್ಲಿ ಲೋಕಸಭೆ ಚುನಾವಣೆ ನಡೆದರೆ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ನಡೆಸಬೇಕೆಂಬ ಷರತ್ತು ಬಿಜೆಪಿಗೆ ಅಪಥ್ಯವಾಗಿದೆ. ಇವೆಲ್ಲವೂ ಸರ್ಕಾರ ರಚನೆಯನ್ನು ಮತ್ತಷ್ಟು ವಿಳಂಬ ಮಾಡಲು ರಾಜ್ಯಪಾಲರಿಗೆ ಒಂದು ಉತ್ತಮ ಕಾರಣ ಸಿಕ್ಕಿದ್ದು, ತಕ್ಷಣವೇ ನಿರ್ಧಾರ ಕೈಗೊಳ್ಳುವ ಸಂಭವವಿಲ್ಲ ಎಂದು ಯುಪಿಎ ಮೂಲಗಳು ಭಾವಿಸಿವೆ.
ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಸರ್ಕಾರ ರಚನೆಗೆ ಅವಕಾಶ ನೀಡಿದರೆ ಯಾವುದೇ ಕ್ಷಣದಲ್ಲಾದರೂ ಸರ್ಕಾರ ಪತನಗೊಳ್ಳಬಹುದು. ಆದ್ದರಿಂದ ಸರ್ಕಾರದ ಸುಭದ್ರತೆ ಖಾತರಿ ಇಲ್ಲದಿರುವಾಗ ಸರ್ಕಾರ ರಚನೆಗೆ ಹೇಗೆ ಅವಕಾಶ ನೀಡಲಿ ಎನ್ನುವುದು ರಾಜ್ಯಪಾಲರ ಭಾವನೆಯಾಗಿರಬಹುದೆಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ದಿನದಿನಕ್ಕೂ ಬದಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಠಾಕೂರ್ ಕಾನೂನು ತಜ್ಞರ ಜತೆ ವ್ಯಾಪಕ ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
|