ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೃಷ್ಣ ಪೂಜೆ: ಉಡುಪಿ ಅಷ್ಷಮಠಾಧೀಶರಲ್ಲಿ ಭಿನ್ನಮತ
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಶ್ರೀಕೃಷ್ಣನ ಪೂಜಾಧಿಕಾರ ಹಸ್ತಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ಅಷ್ಟ ಮಠಾಧೀಶರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ.

ಮಠಾಧೀಶರ ನಡುವೆ ಏಕಾಭಿಪ್ರಾಯ ಮೂಡಿಸುವ ಸಲುವಾಗಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು.

ಈ ಹಿನ್ನೆಲೆಯಲ್ಲಿ ನ. 28ಕ್ಕೆ ಮತ್ತೆ ಸಭೆ ನಡೆಸಲು ನಿರ್ಧರಿಸಲಾಯಿತು. ಪುತ್ತಿಗೆ ಶ್ರೀಗಳು ಸಾಗರೋಲ್ಲಂಘನೆ ಮಾಡಿ ಸಂಪ್ರದಾಯ ಮುರಿದಿದ್ದಾರೆ ಎಂಬ ನೆಪದಲ್ಲಿ ಅಷ್ಟಮಠಾಧೀಶರ ಮಧ್ಯೆ ಬಿಕ್ಕಟ್ಟು ತಲೆದೋರಿತ್ತು.

ಆದರೂ ಸಭೆಯಲ್ಲಿ ಅವರು ಶ್ರೀಕೃಷ್ಣ ದೇಗುಲದ ಪರ್ಯಾಯ ಪೀಠಾರೋಹಣ ನಡೆಸುವುದಕ್ಕೆ ಉಳಿದ ಮಠಾಧಿಪತಿಗಳಿಂದ ವಿರೋಧ ವ್ಯಕ್ತವಾಗದಿರುವುದರಿಂದ, ಪುತ್ತಿಗೆ ಶ್ರೀಗಳು 2008 ಜ. 18ರಂದು ಪರ್ಯಾಯ ಪೀಠಾರೋಹಣ ನಡೆಸುವುದಕ್ಕೆ ಇದ್ದ ಆತಂಕ ದೂರವಾಗಿದೆ.

ಆದರೆ ಸಂಪ್ರದಾಯದಂತೆ ಪರ್ಯಾಯ ಪೀಠದಲ್ಲಿದ್ದು ಮುಂದಿನ 2 ವರ್ಷ ಕಾಲ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವುದಕ್ಕೆ ಮಾತ್ರ ಅಷ್ಟ ಮಠಾಧೀಶರ ಮಧ್ಯೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪಲಿಮಾರು ಶ್ರೀವಿದ್ಯಾಧೀಶರು ಪುತ್ತಿಗೆ ಶ್ರೀಗಳ ಕೃಷ್ಣ ಪೂಜೆಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಶ್ರೀಕೃಷ್ಣ ದೇವಾಲಯದಲ್ಲಿ ಪಾಲನೆಯಾದ ಸಂಪ್ರದಾಯವನ್ನು ಅವರು ಪಾಲಿಸಿ, ಕೃಷ್ಣ ಪೂಜೆ ಅಧಿಕಾರವನ್ನು ತಾವಾಗಿಯೇ ತ್ಯಾಗ ಮಾಡಬೇಕು ಎಂದರು.

ಪರ್ಯಾಯ ಪೀಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರೂ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿರೂರು ಶ್ರೀಗಳು ಪುತ್ತಿಗೆ ಸ್ವಾಮೀಜಿ ಪರ್ಯಾಯ ಪೀಠಾರೋಹಣ ಮತ್ತು ಶ್ರೀಕೃಷ್ಣ ಪೂಜೆ ಎರಡಕ್ಕು ಬೆಂಬಲ ವ್ಯಕ್ತಪಡಿಸಿದರು.

ಮಂತ್ರಾಲಯ ಮಠ, ಉತ್ತರಾಧಿ ಮಠ ಮತ್ತು ಉಡುಪಿ ತುಳು, ಶಿವಳ್ಳಿ, ಮಾಧ್ವ ಮಹಾಮಂಡಲದ ಪ್ರತಿನಿಧಿಗಳು ಹಾಜರಿದ್ದರು.
ಮತ್ತಷ್ಟು
ಪ್ರಕಾಶ್‌ಗೆ ಕಾಂಗ್ರೇಸ್‌ನಿಂದ ಆಹ್ವಾನ
ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತರ ದಾಳಿ
ವಾಹನ ಗಾಜಿಗೆ ಟಿಂಟ್ ಪೇಪರ್ ನಿಷೇಧ ಜಾರಿ
ಬಿಜೆಪಿ-ಜೆಡಿಎಸ್ ಶಾಸಕರಿಂದ ಧರಣಿ ಆರಂಭ
ರಾಜ್ಯದಲ್ಲಿ ಮುಂದುವರಿದ ಅನಿಶ್ಚಿತತೆ
ಅನಿರ್ದಿಷ್ಟ ಚಳವಳಿ: ರಾಜ್ಯ ಬಿಜೆಪಿ ಒತ್ತಡ ತಂತ್ರ