ಪರಿಸರ ಪ್ರವಾಸೋದ್ಯಮ ಅಭಿವೃದ್ದಿಯಲ್ಲಿ ರಾಜ್ಯ ಸರ್ಕಾರ ದೇಶದಲ್ಲೇ ಯಾವ ರಾಜ್ಯವೂ ಮಾಡದ ಜಂಗಲ್ ಕ್ಯಾಂಪ್ಸ್ ಅಂಡ್ ಟ್ರೈಲ್ ಆಫ್ ಕರ್ನಾಟಕ ಎಂಬ ಹೊಸ ಯೋಜನೆ ರೂಪಿಸಿದೆ.
ಪ್ರವಾಸಿಗರು, ಪರಿಸರ ಆಸಕ್ತರು ಅತ್ಯಂತ ಕಡಿಮೆ ವೆಚ್ಚದಲ್ಲಿ, ತಮಗೆ ಇಷ್ಟ ಇರುವ ವಿಷಯಗಳ ಮೇಲೆ ಮತ್ತೊಬ್ಬರ ನೆರವಿಲ್ಲದೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಅಧ್ಯಯನ ನಡೆಸಬಹುದು. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಯೋಜನೆಯ ವರದಿಯನ್ನು ರಾಜ್ಯ ಸರ್ಕಾರ ಸಲ್ಲಿಸಿದೆ.
ಎಲ್ಲವೂ ನೀರೀಕ್ಷೆಯಂತೆ ನಡೆದರೆ 2008ರಲ್ಲಿ ಪ್ರವಾಸಿಗರ ಉಪಯೋಗಕ್ಕೆ ಇದು ಲಭ್ಯವಾಗಲಿದೆ. ಈ ಯೋಜನೆಗೆ ಅನುವಾಗಿರುವ 8 ಹಾಟ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ತಲಕಾವೇರಿಯಲ್ಲಿ ಶೋಲಾ ಕ್ಯಾಂಪ್, ಗೋಪಿನಾಥಂನಲ್ಲಿ ಕಂಟ್ರಿ ಕ್ಯಾಂಪ್, ಭಗವತಿಯಲ್ಲಿ ಹರ್ಬಲ್ ಕ್ಯಾಂಪ್, ಸೀತಾನದಿಯಲ್ಲಿ ಹರ್ಪೆಟೋ ಕ್ಯಾಂಪ್, ಆನೆಝರಿಯಲ್ಲಿ ಬಟರ್ಫ್ಲೈ ಕ್ಯಾಂಪ್, ಸಕ್ರೆಬೈಲ್ನಲ್ಲಿ ಎಲಿಫೆಂಟ್ ಕ್ಯಾಂಪ್, ಕುಳಗಿಯಲ್ಲಿ ಟಿಂಬರ್ ಟ್ರೈಲ್ ಕ್ಯಾಂಪ್, ಅಣಸಿಯಲ್ಲಿ ಗ್ರೀನ್ ಕ್ಯಾಂಪ್ ನಡೆಸಲು ಉದ್ದೇಶಿಸಲಾಗಿದೆ.
ಈ ಯೋಜೆನೆ ಜಾರಿಯೊಂದಿಗೆ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ವಿಶೇಷಾಧಿಕಾರಿ ಡಾ. ಸಂಜಯ್ ಬಿಜ್ಜೂರ್ ಹೇಳಿದ್ದಾರೆ.
|