ಬಿಜೆಪಿ-ಜೆಡಿಎಸ್ ಅವಕಾಶವಾದಿ ರಾಜಕಾರಣದ ವಿರುದ್ಧ ಜನಾಂದೋಲನ ಆರಂಭಿಸಿರುವ ಕಾಂಗ್ರೆಸ್,ಚುನಾವಣೆಗೆ ಸಿದ್ಧರಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದೆ.
ರಾಜ್ಯ ಕಾಂಗ್ರೆಸ್‌ನ ಸಮಸ್ತ ನಾಯಕರು ವೇದಿಕೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರಲ್ಲದೆ, ಪಕ್ಷ ಚುನಾವಣೆಗೆ ಸಂಪೂರ್ಣ ಸಿದ್ಧವಿದೆ ಎಂದು ಘೋಷಿಸಿದರು.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ-ಜೆಡಿಎಸ್ ಮರುಮೈತ್ರಿ ಸರಕಾರ ಸಾಧ್ಯವೇ ಇಲ್ಲ ಮತ್ತು ಸಾಧುವೂ ಅಲ್ಲ. ಈ ಪ್ರಯತ್ನದಲ್ಲಿ ಮೈತ್ರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಈ ಪಕ್ಷಗಳಿಗೆ ಮತ್ತೆ ಅಧಿಕಾರದ ಅವಕಾಶ ಸಿಕ್ಕರೆ ರಾಜ್ಯ ಹಾಳಾಗಲಿದೆ, ಖಜಾನೆ ಲೂಟಿಯಾಗಿ ಅರಾಜಕ ಸ್ಥಿತಿ ಸೃಷ್ಟಿಯಾಗಲಿದೆ. ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆದು ಜನ ಸಾಮಾನ್ಯರನ್ನು ತುಳಿದು ಹಾಕುತ್ತಾರೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಪ್ರತಿಷ್ಟೆಗೆ ಬಿದ್ದು ಜನಪ್ರತಿನಿಧಿ ಸರಕಾರವನ್ನು ಬಲಿಕೊಟ್ಟಿದ್ದಲ್ಲದೆ,ತಪ್ಪನ್ನು ಕಾಂಗ್ರೆಸ್ ಮೇಲೆ ಹೊರಿಸಿ ಗೂಬೆ ಕೂರಿಸುವ ನಾಚಿಕೆಗೇಡಿನ ಕೆಲಸ ಮಾಡುತ್ತಿದೆ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ನಾಯಕನೆಂದು ಒಪ್ಪಿಕೊಂಡವರು,ಅದೇ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವ ಲಜ್ಜೆಗೆಟ್ಟ ವರ್ತನೆ ತೋರುತ್ತಿದ್ದಾರೆ ಎಂದು ಎಲ್ಲ ಮುಖಂಡರು ಬಿಜೆಪಿ ವಿರುದ್ಧ ಕಟುಟೀಕೆ ಮಾಡಿದರು.
ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಬಿಜೆಪಿಗೆ ಜನತಂತ್ರ ವ್ಯವಸ್ಥೆಯಲ್ಲಿ ವಿಶ್ವಾಸವಿದ್ದರೆ ಮತ್ತು ಜನಪ್ರತಿನಿಧಿ ಸರಕಾರದ ಮುಂದುವರಿಕೆ ಬಯಸಿದ್ದರೆ ಅ.8ರಂದು ಕುಮಾರಸ್ವಾಮಿ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡು ಏಕೆ ಹೊರಬಂದರು ಎಂದು ಪ್ರಶ್ನಿಸಿದರು.
|