ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಜಕೀಯ ದೆಹಲಿಯಲ್ಲಿ ಬಿರುಸುಗೊಂಡಿದೆ. ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಮಂಗಳವಾರ ಸಂಜೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಎದುರು ಪರೇಡ್ ನಡೆಸುವ ಹಿನ್ನೆಲೆಯಲ್ಲಿ ಇಂದು ಮಹತ್ವದ ನಿರ್ಧಾರ ಕೇಂದ್ರದಿಂದ ತೀರ್ಮಾನವಾಗಲಿದೆ. ಇದರೊಂದಿಗೆ ರಾಜ್ಯ ರಾಜಕೀಯ ಗೊಂದಲಕ್ಕೆ ತೆರೆ ಬೀಳಬಹುದು ಎಂಬುದು ದೋಸ್ತಿ ಪಕ್ಷಗಳ ಮುಖಂಡರ ವಿಶ್ವಾಸ. ಆದರೆ ಇದರಿಂದ ಮತ್ತೊಂದು ಸಮಸ್ಯೆ ಉದ್ಭವಿಸಬಹುದು ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಯಾರೂ ಬಯಸದೆ ಶಾಸಕರು ಸ್ವಯಂಪ್ರೇರಿತರಾಗಿ ರಾಷ್ಟ್ರಪತಿ ಎದುರು ಶಾಸಕರ ಪರೇಡ್ ನಡೆಸುವುದರಿಂದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಿರಿ ಕಿರಿ ಉಂಟಾಗಿ ವ್ಯತಿರಿಕ್ತ ಪರಿಣಾಮಗಳು ಎದುರಾಗಬಹುದು ಎಂಬುದು ಅವರ ಲೆಕ್ಕಾಚಾರ.
ಸೋಮವಾರ ರಾತ್ರಿ ಒಂದೇ ವಿಮಾನದಲ್ಲಿ ದೋಸ್ತಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಜೆಡಿಎಸ್ ಪಕ್ಷದ ಮುಖಂಡರಾದ ಮೆರಾಜುದ್ದೀನ್ ಪಟೇಲ್, ಕುಮಾರಸ್ವಾಮಿ ಹಾಗೂ ರೇವಣ್ಣ ಮಾತ್ರ ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ.
ಜೆಡಿಎಸ್ ಶಾಸಕರು ದೆಹಲಿಗೆ ಹೋಗಿದ್ದು ಪಕ್ಷದ ವರಿಷ್ಠ ದೇವೇಗೌಡರಿಗೆ ಹಾಗೂ ರೇವಣ್ಣ ಅವರಿಗೆ ಇಷ್ಟವಾಗಲಿಲ್ಲ. ಅವರ ಮನವೊಲಿಸುವ ಪ್ರಯತ್ನ ನಡೆದಿದೆ.
|