ಕತ್ತಲೆ ಕಳೆದು ಬೆಳಕು ಮೂಡಿಸುವ ದೀಪಗಳ ಸಾಲಿನ ಹಬ್ಬ ದೀಪಾವಳಿಗೆ ಊರಿಗೆ ಊರೇ ಸಜ್ಜುಗೊಂಡಿದ್ದು, ದೀಪಾವಳಿ ಶಾಪಿಂಗ್ ಭರದಿಂದ ನಡೆಯುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಮನೆಮಂದಿ ತುಳಸೀ ಪೂಜೆ, ಗೋಪೂಜೆ ಜತೆಗೆ ಪಟಾಕಿ ಹಚ್ಚಿ ಹಬ್ಬದ ಸಂಭ್ರಮದಲ್ಲಿದ್ದಾರೆ, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಇದೀಗ ಭರದ ಶಾಪಿಂಗ್. ಹೊಸ ಬಟ್ಟೆ-ಬರೆಗಳನ್ನು ಕೊಳ್ಳುವ ಉತ್ಸಾಹ ಜನರದ್ದು. ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಎಲ್ಲೆಡೆ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ.
ಫೋರಂ, ಗರುಡ ಮಾಲ್ ಗಳಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ನಗರದ ಮಾರುಕಟ್ಟೆಯಲ್ಲಿ ವಿಧವಿಧ ಬಣ್ಣದ ಆಕಾಶಬುಟ್ಟಿಗಳು ಎಲ್ಲರ ಕಣ್ಮನ ಸೆಳೆಯುತ್ತಿದೆ. ಈ ನಡುವೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಮುಖ ಪ್ರದೇಶಗಳು, ಧಾರ್ಮಿಕ ತಾಣಗಳಿಗೆ ವಿಶೇಷ ಬಸ್ ಸೌಕರ್ಯವನ್ನು ಕಲ್ಪಿಸಿದೆ.
ಪಟಾಕಿ ಎಚ್ಚರಿಕೆ : ದೀಪಾವಳಿ ಹಬ್ಬದ ಸಂಭ್ರಮಕ್ಕೆ ಪಟಾಕಿಗಳು ಬಹುತೇಕ ಬಾರಿ ಕಪ್ಪು ಚುಕ್ಕೆಯಾಗುತ್ತಿದ್ದು ಈ ಸಂಬಂಧ ಪೋಷಕರು ಪಟಾಕಿ ಖರೀದಿಯ ಸಂದರ್ಭದಲ್ಲಿ ಹಾಗೂ ಅದನ್ನು ಹಚ್ಚುವ ವೇಳೆ ಎಚ್ಚರಿಕೆ ವಹಿಸಬೇಕು ಎಂದು ನಗರದ ಕೆಲ ಸಂಘಟನೆಗಳು ಜನತೆಯಲ್ಲಿ ಮನವಿ ಮಾಡಿವೆ.
|