ರಾಷ್ಟ್ರಪತಿಗಳ ಎದುರು ದೋಸ್ತಿಪಕ್ಷಗಳ ಶಾಸಕರ ಪರೇಡ್ ನಡೆಸಲಾಗಿದೆ. ರಾಜ್ಯಪಾಲರು ಸಹಾ ತಮ್ಮ ಅಂತಿಮ ವರದಿಯನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಇನ್ನೇನೂ ತಮಗೆ ಆಡಳಿತ ಚುಕ್ಕಾಣಿ ಹಿಡಿಯುವ ಸಮಯ ಒದಗಿ ಬಂದಿದೆ ಎಂದು ಯಡಿಯೂರಪ್ಪ ಹಾಗೂ ಅವರ ಪಕ್ಷದವರು ಆತುರ ಪಡುವ ಹಾಗಿಲ್ಲ.
ಹೊಸ ಮೈತ್ರಿ ಸರ್ಕಾರ ರಚನೆಗೆ ಪೂರಕವಾದ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದರೂ ಇನ್ನೂ ಆಗಬೇಕಾದ ಕೆಲಸ ಬೇಕಾದಷ್ಟಿದೆ.
ಹೊಸ ಸರ್ಕಾರದ ಪ್ರತಿಷ್ಠಾಪನೆ ಎರಡು ಹಂತಗಳ ಪ್ರಕ್ರಿಯೆ. ಮೊದಲನಯದು ರಾಷ್ಟ್ರಪತಿಗಳ ಆಳ್ವಿಕೆಯನ್ನು ರದ್ದು ಮಾಡುವುದು. ಅನಂತರ ಹೊಸ ಸರ್ಕಾರ ರಚನೆ ಎಂಬ ಮಾತನ್ನು ರಾಜ್ಯಪಾಲರು ಆಡಿರುವುದರಿಂದ ಸರ್ಕಾರ ರಚನೆಗೆ ಹಸಿರು ನಿಶಾನೆ ದೊರೆತಿದೆ ಎಂದೇ ಭಾವಿಸಲಾಗಿದೆ.
ರಾಜ್ಯಪಾಲರ ಶಿಫಾರಸು ಸರ್ಕಾರ ರಚನೆಗೆ ಅವಕಾಶ ನೀಡುವ ಪರವಾಗಿದೆ ಎಂಬುದಾಗಿ ದೆಹಲಿ ರಾಜಕೀಯ ವಲಯಗಳಲ್ಲಿ ವ್ಯಾಪಿಸಿರುವ ಮಾತುಗಳನ್ನು ರಾಜ್ಯಪಾಲರಾಗಲಿ, ಕೇಂದ್ರ ಗೃಹ ಸಚಿವಾಲಯವಾಗಲೀ ಖಚಿತಪಡಿಸಿಲ್ಲ.
ಈ ಹೊಸ ಸರ್ಕಾರ ಸುಭದ್ರತೆಯ ಕುರಿತು ರಾಜ್ಯಪಾಲರು ಶಂಕೆ ವ್ಯಕ್ತಪಡಿಸಿರುವುದು ಬಿಜೆಪಿ ಪಾಳಯವನ್ನು ಚಿಂತೆಗೀಡುಮಾಡಿದೆ.
ತಮ್ಮ ವರದಿಯನ್ನು ಸಲ್ಲಿಸಿಯಾಗಿದೆ. ಇನ್ನು ಚೆಂಡು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳ ಅಂಗಳದಲ್ಲಿ ಎಂದು ಹೇಳಿರುವುದರಿಂದ ಇನ್ನು ಸರ್ಕಾರ ರಚನೆಗೆ ಆಗುವ ವಿಳಂಬಕ್ಕೆ ಬಿಜೆಪಿ ರಾಜ್ಯಪಾಲರನ್ನು ದೂರುವ ಹಾಗಿಲ್ಲ.
|