ರಾಜ್ಯಪಾಲರಿಂದ ಹೊಸ ಸರ್ಕಾರ ರಚನೆ ಸಂಬಂಧ ಕರೆ ಬಂದ ತಕ್ಷಣ ದೋಸ್ತಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವ ದಿನದಂದೇ ಉಪ ಮುಖ್ಯಮಂತ್ರಿಯಾಗಿ ಯಾರೋ ಒಬ್ಬರು ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ. ಆದರೆ ಇತರೆ ಖಾತೆಗಳ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಇನ್ನು ವಿಳಂಬವಾಗುವ ಸಂಭವವಿದೆ.
ಯಾರಿಗೆ ಯಾವ ಖಾತೆ ಹಂಚಬೇಕು ಎಂಬುದರ ಬಗ್ಗೆ ಸಮಾಲೋಚನೆಗಳು ಆರಂಭವಾಗಿವೆ. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿ, ಬಿಜೆಪಿಯೊಂದಿಗೆ ಮರುಮೈತ್ರಿ ಮಾಡಿಕೊಂಡ ಜೆಡಿಎಸ್ ಮುಖಂಡರ ವರ್ತನೆಗೆ ರೋಸಿಹೋಗಿ ಮುನಿಸಿಕೊಂಡಿರುವ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಅವರು ಸಹಾ ಇಂದು ಜೆಡಿಎಸ್ ಮುಖಂಡ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಹೊಸ ಸರ್ಕಾರ ರಚನೆಗೆ ಸಂಬಂಧಿಸಿ ಮಾರ್ಗದರ್ಶನವನ್ನು ಪಡೆಯುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ. ಭಾನುವಾರ ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ.
|