ರಾಜ್ಯಪಾಲರಿಂದ ಹೊಸ ಸರ್ಕಾರ ರಚನೆಗೆ ಆಹ್ವಾನ ಬಂದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಯಾರು ಆಗುತ್ತಾರೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಎದುರಾಗಿದೆ.
ಉಪ ಮುಖ್ಯಮಂತ್ರಿ ಹುದ್ದೆ ಜೆಡಿಎಸ್‌ಗೆ ನೀಡಬೇಕು ಎಂಬುದು ಅಲಿಖಿತ ನಿಯಮ. ಹಾಗಾಗಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಜೆಡಿಎಸ್‌ನಲ್ಲಿ ಲಾಬಿ ಆರಂಭವಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಉಪ ಮುಖ್ಯಮಂತ್ರಿಯಾಗಿದ್ದರೆ ಆಡಳಿತದ ಮೇಲೆ ಪಕ್ಷದ ಹಿಡಿತವಿರುತ್ತದೆ ಎಂಬುದು ಕೆಲ ಶಾಸಕರ ಅಭಿಪ್ರಾಯ.
ಆದರೆ ಮುಖ್ಯಮಂತ್ರಿಯಾಗಿದ್ದವರು ಮತ್ತೆ ಉಪ ಮುಖ್ಯಮಂತ್ರಿಯಾಗುವುದು ಸರಿಯಲ್ಲ ಎಂಬುದು ಕುಮಾರಸ್ವಾಮಿ ಅವರ ಅಭಿಮತ.
ಉಪ ಮುಖ್ಯಮಂತ್ರಿಯಾಗಲು ಎಚ್.ಡಿ. ರೇವಣ್ಣ ಅವರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ತಮ್ಮ ಬೇಡಿಕೆ ಈಡೇರಲು ರೇವಣ್ಣ ಮತ್ತು ಅವರ ಪತ್ನಿ ದೇವೇಗೌಡರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಈ ವಿಷಯದ ಕುರಿತು ಭಾನುವಾರ ನಡೆಯಲಿರುವ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಯುವ ಸಂಭವವಿದೆ. ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲವಿದೆ.
ಈ ಹುದ್ದೆ ಆಕಾಂಕ್ಷಿಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಅವರೂ ಇದ್ದಾರೆ.
|