ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಳ್ಳುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಾನು ಉಪಮುಖ್ಯಮಂತ್ರಿಯಾಗಿರಬೇಕು ಎಂಬುದು ಪಕ್ಷದ ಶಾಸಕರ ಒಲವು, ಅದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಇದಕ್ಕೂ ಮೊದಲು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು, ಕುಮಾರಸ್ವಾಮಿ ಅವರೇ ಉಪಮುಖ್ಯಮಂತ್ರಿಯಾಗಿರುತ್ತಾರೆ. ಈ ಬಗ್ಗೆ ಭಾನುವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಕುಮಾರಸ್ವಾಮಿ, ಶಾಸಕರು ನನ್ನ ಬಗ್ಗೆ ನಂಬಿಕೆ ಇಟ್ಟಿದ್ದಾರೆ ಎಂಬುದು ಸಂತೋಷ. ಇದಕ್ಕಾಗಿ ನಾನು ಶಾಸಕರಿಗೆ ಎಷ್ಟು ಋಣಿಯಾಗಿದ್ದರೂ ಸಾಲದು ಎಂದರು.
ಮಾಧ್ಯಮಗಳ ವಿರುದ್ಧ ಮತ್ತೆ ಹರಿಹಾಯ್ದ ಕುಮಾರಸ್ವಾಮಿ, ಮಾಧ್ಯಮಗಳಿಗೆ ಈ ವಿಚಾರದಲ್ಲಿ ಬಹಳ ತುರ್ತಿರುವಂತೆ ಕಾಣುತ್ತಿದೆ. ನಾನು ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅವರೇ ಸಲಹೆ ನೀಡಲಿ ಎಂದರು.
ಅಲ್ಲದೇ ಭಾನುವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ನಮ್ಮ ಪಕ್ಷಕ್ಕೆ ಶೇ.50ರಷ್ಟು ಸ್ಥಾನಗಳನ್ನು ನೀಡಬೇಕು ಎಂಬ ಮನವಿಯನ್ನು ಮಾಡಲಾಗುವುದು ಎಂದರು.
|