ಕರ್ನಾಟಕದ ಉದ್ದಗಲಕ್ಕೂ ಸುತ್ತಿ ಜನರ ನಾಡಿ ಮಿಡಿತವನ್ನು ಬಲ್ಲ ಬೆರಳೆಣಿಕೆಯ ರಾಜಕಾರಣಿಗಳ ಪೈಕಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಒಬ್ಬರು.
ಪ್ರತಿಪಕ್ಷದಲ್ಲೇ ಹಲವು ವರ್ಷ ಕಾರ್ಯನಿರ್ವಹಿಸಿದ ಅವರ ಛಲವೇ ಅವರ ವ್ಯಕ್ತಿತ್ವ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯವರಾದರೂ ಆರ್ಎಸ್ಎಸ್ ಶಿಸ್ತಿನ ಸಿಪಾಯಿಯಾಗಿ ಶಿಕಾರಿಪುರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬಂದವರು.
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಅವರು ಪ್ರಮುಖರು ಎಂದು ಅವರ ವಿರೋಧಿಗಳು ಸಹಾ ಒಪ್ಪುತ್ತಾರೆ.
ಸರ್ಕಾರಗಳ ವಿರುದ್ಧ ಅವರ ಹೋರಾಟದ ಫಲವೇ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆತಿರುವುದು ಎಂದರೆ ಅತಿಶಯೋಕ್ತಿ ಏನಲ್ಲ.
ವಾಚಾಳಿ ಎಂದೇ ಹೆಸರು ಪಡೆದಿದ್ದ ಯಡಿಯೂರಪ್ಪ ಅವರನ್ನು ಅಧಿಕಾರ ಹಸ್ತಾಂತರ ಅವಾಂತರ ಮೌನವ್ರತಕ್ಕೆ ದೂಡಿತು. 1962ರಲ್ಲಿ ಆರ್ಎಸ್ಎಸ್ ಸಾಮಾನ್ಯ ಕಾರ್ಯಕರ್ತನಾಗಿದ್ದ ಯಡಿಯೂರಪ್ಪ ಅವರು ಮುಂದಿನ ಮುಖ್ಯಮಂತ್ರಿ.
ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಪಕ್ಷವನ್ನು ಗ್ರಾಮೀಣ ಮಟ್ಟಕ್ಕೂ ಒಯ್ದ ಕೀರ್ತಿಯ ಬಹುಪಾಲು ಪಕ್ಷದ ರಾಜ್ಯಾಧ್ಯಕ್ಷರಾಗಿ 8 ವರ್ಷಗಳ ಕಾಲ ದುಡಿದ ಯಡಿಯೂರಪ್ಪ ಅವರಿಗೆ ಸಲ್ಲಬೇಕು.
ಹುಟ್ಟು ಹೋರಾಟ ಗುಣದ ಯಡಿಯೂರಪ್ಪ ಅವರು ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆಯಲ್ಲೂ ಕೈದಿಗಳಿಗೆ ಆಗುತ್ತಿದ್ದ ಆನ್ಯಾಯದ ವಿರುದ್ಧ ಹೋರಾಡಿದವರು.
ಜನತಾ ಪಕ್ಷದ ಸರ್ಕಾರದಲ್ಲಿ ಬಿ. ರಾಚಯ್ಯ ಅರಣ್ಯ ಮಂತ್ರಿಯಾಗಿದ್ದಾಗ ದಲಿತರ ಭೂಮಿಯನ್ನು ರೈತರಿಂದ ಕಸಿದು ಅರಣ್ಯ ಇಲಾಖೆಗೆ ವರ್ಗಾಯಿಸಲು ಸರ್ಕಾರ ಮುಂದಾದಾಗ ವಿಧಾನಸಭೆಯಲ್ಲಿದ್ದ ಬಿಜೆಪಿಯ ಏಕಮೇವ ಸದಸ್ಯ ಯಡಿಯೂರಪ್ಪ ಅವರು ಸದನದಲ್ಲೇ ಗಳಗಳನೇ ಅತ್ತರು. ಕೊನೆಗೆ ಸರ್ಕಾರ ಮಸೂದೆಯನ್ನು ಹಿಂತೆಗೆದುಕೊಂಡಿತು.
64 ವರ್ಷದ ಯಡಿಯೂರಪ್ಪ ಮುಖ್ಯಮಂತ್ರಿ ಗಾದಿ ಏರಲು ಇದ್ದ ತೊಡಕುಗಳು ನಿವಾರಣೆಯಾಗಿವೆ. ಈವರೆಗಿನದು ರಾಜಕೀಯ ಹೋರಾಟವಾದರೆ ಮುಖ್ಯಮಂತ್ರಿ ಪಟ್ಟ ಹತ್ತಿದ ಮೇಲೆ ಅಧಿಕಾರ ಉಳಿಸಿಕೊಳ್ಳುವ ಕಸರತ್ತು ಆರಂಭವಾಗುತ್ತದೆ.
ದೋಸ್ತಿ ಪಕ್ಷ ಜೆಡಿಎಸ್‌ನ ಬದಲಾಗುವ ನಿಲುವು ಯಡಿಯೂರಪ್ಪ ಅವರಿಗೆ ಅರ್ಥವಾಗಿದ್ದರೂ ಸಮ್ಮಿಶ್ರ ಸರ್ಕಾರ ನಡೆಸುವುದು ಅಷ್ಟು ಸುಲಭದ ಮಾತಲ್ಲ ಎನ್ನವುದಂತೂ ನಿಜ.
|