ಕರ್ನಾಟಕದ ಜನತೆ ಈ ವರೆಗೆ ಕಂಡು ಕೇಳರಿಯದ ಕಳೆದ 40 ದಿನಗಳ ಅಧಿಕಾರ ಹಸ್ತಾಂತರದ ಏಳು ಬೀಳುಗಳ ನಡುವೆ ಯಡಿಯೂರಪ್ಪ ನೇತೃತ್ವದ ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸೆಪ್ಟೆಂಬರ್ 30ರಂದು ಅಧಿಕಾರ ಹಸ್ತಾಂತರದ ವಿಷಯವಾಗಿ ಯಶವಂತ ಸಿನ್ಹಾ ಹಾಗೂ ದೇವೇಗೌಡರ ನಡುವೆ ಮಾತುಕತೆ ಅರ್ಧಕ್ಕೆ ನಿಂತ ನಂತರ ನಡೆದ ರಾಜಕೀಯ ಬೆಳವಣಿಗೆಗಳು ಉಸಿರಾಡುವುದನ್ನು ಬಿಟ್ಟು ನೋಡುವಂತಹವು.
ಬಿಜೆಪಿ ಸಚಿವರ ಸಾಮೂಹಿಕ ರಾಜೀನಾಮೆ, ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ವಚನ ಭ್ರಷ್ಟರಾಗಲು ಸಿದ್ಧ ಎಂದು ಕುಮಾರಸ್ವಾಮಿ ಘೋಷಣೆ, ಜೆಡಿಎಸ್ನೊಂದಿಗೆ ಕಾಂಗ್ರೆಸ್ ಕೈ ಜೋಡಿಸಲು ನಿರ್ಧಾರ. ಬಿಜೆಪಿಯಿಂದ ಬೆಂಬಲ ವಾಪಸ್, ಧರ್ಮಯಾತ್ರೆಗೆ ನಿರ್ಧಾರ, ಕುಮಾರಸ್ವಾಮಿ ರಾಜಿನಾಮೆ, ಜೆಡಿಎಸ್ ನಿಂದ ಸಂದೇಶಕ್ಕೆ ಪ್ರತಿಕ್ರಿಯಿಸಿ ಧರ್ಮಯಾತ್ರೆಯನ್ನು ಮಧ್ಯದಲ್ಲೇ ನಿಲ್ಲಿಸಿ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್.
ಜೆಡಿಎಸ್‌ನಲ್ಲಿ ಭುಗಿಲೆದ್ದ ಭಿನ್ನಮತ. ಎಂ.ಪಿ.ಪ್ರಕಾಶ್ ಅವರಿಂದ ಬಂಡಾಯದ ಬಾವುಟ. ಪ್ರಕಾಶ್ ಯತ್ನಕ್ಕೆ ಶಾಸಕರ ಬೆಂಬಲ. ದೇವೇಗೌಡರಿಗೆ ತಳಮಳ. ಮತ್ತೆ ಜೆಡಿಎಸ್ ಬೆಂಬಲ ಘೋಷಣೆ.
ರಾಜ್ಯಪಾಲರ ಎದುರು ದೋಸ್ತಿ ಪಕ್ಷಗಳ ಶಾಸಕರ ಪರೇಡ್. ರಾಜ್ಯಪಾಲರ ವಿಳಂಬದ ವಿರುದ್ಧ ಬಿಜೆಪಿ ಪ್ರತಿಭಟನೆ, ಅಹೋರಾತ್ರಿ ಧರಣಿ, ರಾಷ್ಟ್ತ್ರಪತಿ ಎದುರು ದೋಸ್ತಿ ಪಕ್ಷಗಳ ಶಾಸಕರು ಪರೇಡ್, ರಾಷ್ಟ್ತ್ರಪತಿ ಆಡಳಿತ ತೆರವಿಗೆ ಕೇಂದ್ರದ ನಿರ್ಧಾರ.
ಸರ್ಕಾರ ರಚನೆಗೆ ರಾಜ್ಯಪಾಲರಿಂದ ಯಡಿಯೂರಪ್ಪ ಅವರಿಗೆ ಆಹ್ವಾನದೊಂದಿಗೆ ಸೋಮವಾರ ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕಾರದ ನಿರ್ಧಾರದೊಂದಿಗೆ ಈ ಘಟನಾವಳಿಗಳ ಅಂತ್ಯವಾಗಲಿದ್ದು, ಸಮ್ಮಿಶ್ರ ಸರ್ಕಾರದ ಮುಂದಿನ ಹಾದಿ ತೆರೆದುಕೊಳ್ಳಲಿದೆ.
|