ಹುಟ್ಟು ಹೋರಾಟಗಾರ ಯಡಿಯೂರಪ್ಪ ಅವರ ಬಹುವರ್ಷಗಳ ಕನಸು ಸೋಮವಾರ ಸಾಕಾರಗೊಳ್ಳಲಿದೆ. ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲರ ಜತೆ ಸಮಾಲೋಚನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿದಾಗ ಅವರ ಮುಖ ಸಂತಸದಿಂದ ಬೆಳಗುತ್ತಿತ್ತು.
ಇದರೊಂದಿಗೆ ಕಳೆದ 40 ದಿನಗಳ ಕಾಲದ ರಾಜಕೀಯ ದೊಂಬರಾಟ ಅಂತ್ಯಗೊಂಡಿದೆ. ದೇವರು, ಭಕ್ತಿ ಎಂದರೆ ಹೆಚ್ಚು ನಂಬಿಕೆ ಇರುವ ಯಡಿಯೂರಪ್ಪ ಅವರು ಕಾರ್ತಿಕ ಮಾಸದ ಸೋಮವಾರ ಬೆಳಗ್ಗೆ 10.15ಕ್ಕೆ ಪ್ರಮಾಣ ವಚನ ಸ್ವೀಕರಿಸುವ ಸಂಭವವಿದೆ.
ಅವರ ಜತೆ ಎಷ್ಟು ಮಂದಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ. ಸರ್ಕಾರ ರಚನೆ ಯಾದನಂತರ ಶೀಘ್ರ ಬಹುಮತ ಸಾಬೀತುಪಡಿಸುವುದಾಗಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಆರ್ಎಸ್ಎಸ್ ನಾಯಕರ ಜತೆ ಸರ್ಕಾರ ನಡೆಸುವ ಬಗ್ಗೆ ಯಡಿಯೂರಪ್ಪ ಅವರು ಮಾರ್ಗದರ್ಶನ ಪಡೆದಿದ್ದಾರೆ.
|