ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರಥಮ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡ್ಯೂರಪ್ಪ ಮತ್ತು ಉಪಮುಖ್ಯಮಂತ್ರಿಯಾಗಿ ಜೆಡಿಎಸ್ ಪ್ರತಿನಿಧಿಯೊಬ್ಬರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದು,ಅಲ್ಲದೇ ಗುರುವಾರ ಅವರು ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಡಿಸಿಎಂ ಕುರಿತು ಭಾನುವಾರ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರವಾಗಲಿದೆ. ಬಿಜೆಪಿಯ ಯಡ್ಯೂರಪ್ಪ ಅವರ ಜತೆಗೆ ಜೆಡಿಎಸ್‌ನ ಒಬ್ಬರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಹುತೇಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಹಿಂಬಡ್ತಿ ಪಡೆದು ಉಪಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಅವರ ಸಹೋದರ ಎಚ್.ಡಿ. ರೇವಣ್ಣ, ಜೆಡಿಎಸ್‌ನ ಮೆರಾಜುದ್ದೀನ್ ಪಟೇಲ್ ಅವರ ಹೆಸರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಚಾಲ್ತಿಯಲ್ಲಿದೆ.
ಅದು ಯಾರೇ ಆದರೂ ಆ ಹುದ್ದೆ ಮಾತ್ರ ಗೌಡರ ಕುಟುಂಬದಲ್ಲಿಯೇ ಇರುತ್ತದೆ.ಸಚಿವ ಸ್ಥಾನಗಳು, ಖಾತೆಗಳ ಹಂಚಿಕೆ ಈ ಯಾವುದೇ ವಿಚಾರಗಳಲ್ಲಿಯೂ ಎರಡೂ ಪಕ್ಷಗಳ ನಡುವೆ ಇನ್ನೂ ಮಾತುಕತೆ ಅಂತಿಮವಾಗಿಲ್ಲ.
ಗುರುವಾರ ನಡೆಯುವ ವಿಶ್ವಾಸಮತ ಯಾಚನೆಯ ಕಡೆ ಎರಡೂ ಪಕ್ಷಗಳು ಗಮನ ಕೇಂದ್ರೀಕರಿಸಿದ್ದು, ಆ ನಂತರ ಸಂಪುಟ ವಿಸ್ತರಣೆಯತ್ತ ಗಮನ ಹರಿಸಲಾಗುತ್ತದೆ.
|