ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರಕಾರದ ಉಪಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಆಡಳಿತವನ್ನು ನೀಡಿ ಕ್ಲೀನ್ ಇಮೇಜ್ ಪಡೆದ ಕುಮಾರಸ್ವಾಮಿ ಡಿಸಿಎಂ ಆಗಲು ಸೂಕ್ತ ವ್ಯಕ್ತಿ ಎಂಬ ಸರ್ವಾನುಮತದ ಬೆಂಬಲಕ್ಕೆ ಸ್ವಾಮಿ ಕೂಡ ಒಪ್ಪಿಗೆ ನೀಡಿದ್ದಾರೆ.
ನೂತನ ಸರಕಾರ ರಚನೆ ಮುನ್ನ ಉಪಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಕಾಡಿತ್ತು. ಡಿಸಿಎಂ ಹುದ್ದೆಗಾಗಿ ಎಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಅಧ್ಯಕ್ಷೆ ಮೆರಾಜುದ್ದೀನ್ ಪಟೇಲ್ ಅವರ ಹೆಸರೂ ಕೇಳಿ ಬಂದಿತ್ತು. ಆದರೆ ಪಕ್ಷದ ಶಾಸಕರು ಮತ್ತು ತಂದೆ ಎಚ್.ಡಿ. ದೇವೇಗೌಡರು ಕುಮಾರಸ್ವಾಮಿಯೇ ಡಿಸಿಎಂ ಆಗಬೇಕೆಂಬ ಇಚ್ಛೆ ಹೊಂದಿದ್ದರು.
ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಯಡ್ಯೂರಪ್ಪ ಅವರಿಗೆ ಸರಕಾರ ರಚನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಶುಕ್ರವಾರ ಆಹ್ವಾನ ನೀಡಿದ್ದರು. ಅದರಂತೆ ಪ್ರಮಾಣವಚನ ಸ್ವೀಕಾರದ ನಂತರ ಬಹುಮತ ಪ್ರದರ್ಶನ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸೋಮವಾರದಂದು ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ಯಡ್ಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಎಂ.ವೆಂಕಯ್ಯ ನಾಯ್ಡು, ಸುಶ್ಮಾ ಸ್ವರಾಜ್ ಮತ್ತು ಅರುಣ್ ಜೈಟ್ಲಿ ಭಾಗವಹಿಸಲಿದ್ದಾರೆ.
|