ಜೆಡಿಎಸ್ ಮುಖಂಡರ ಮಾತು ನಂಬಿ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ ಸರ್ಕಾರ ರಚನೆಗೆ ಪ್ರಯತ್ನಿಸಿ ವಿಫಲರಾದ ಜೆಡಿಎಸ್ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಹೊಸ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಮುಂದಾಗುವುರೇ?
ಈ ಮಿಲಿಯನ್ ಡಾಲರ್ ಪ್ರಶ್ನೆ ದೋಸ್ತಿ ಪಕ್ಷಗಳ ಮುಖಂಡರಿಗೆ ಎದುರಾಗಿದೆ.
ನಿಯೋಜಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂ.ಪಿ.ಪ್ರಕಾಶ್ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ಸೇರುವಂತೆ ಮನವೊಲಿಸಲು ಯತ್ನಿಸಿದರು.
ಮರು ಮೈತ್ರಿ ಸರ್ಕಾರಕ್ಕೆ ಮಾರ್ಗದರ್ಶನ ಹಾಗೂ ಸಹಕಾರ ನೀಡುವಂತೆ ಪ್ರಕಾಶ್ ಅವರನ್ನು ಕೋರಿರುವುದಾಗಿ ಹೇಳಿದರು. ಪ್ರಕಾಶ್ ಅವರಂತಹ ಹಿರಿಯ ನಾಯಕರ ಮಾರ್ಗದರ್ಶನ ಸಮ್ಮಿಶ್ರ ಸರ್ಕಾರಕ್ಕೆ ಅಗತ್ಯವಿದೆ ಎಂದ ಅವರು ಸಚಿವ ಸಂಪಟಕ್ಕೆ ಸೇರುವಂತೆ ಮನವಿ ಮಾಡಿದ್ದಾಗಿ ಅವರು ತಿಳಿಸಿದರು.
ಅದರ ಬಗ್ಗೆ ಪ್ರತಿಕ್ರಿಯಿಸಿದ ಎಂ.ಪಿ.ಪ್ರಕಾಶ್ ಅವರು ಮೈತ್ರಿ ಸರ್ಕಾರದಲ್ಲಿ ಭಾಗಿಯಾಗಿರುವ ಕುರಿತು ನಿರ್ಧಾರ ಕೈಗೊಳ್ಳಲು ಇನ್ನೂ ಕಾಲಾವಕಾಶವಿದೆ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಜೆಡಿಎಸ್‌ನಲ್ಲಿ ತಳಮಳ ಉಂಟುಮಾಡಿದ ಪ್ರಕಾಶ್ ಅವರನ್ನು ಪ್ರತಿಷ್ಠಿತ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಗಾದಿಗೆ ತರುವ ಪ್ರಕ್ರಿಯೆಗೆ ಕಲಾಸಕ್ತರ ಗುಂಪು ಚಾಲನೆ ನೀಡಿದೆ.
ಈ ಸಂಬಂಧ ಸಿಕೆಪಿಯ ಪ್ರಮುಖರಾದ ಬಿ.ಎಲ್. ಶಂಕರ್ ಮತ್ತು ಡಿ.ಕೆ.ಚೌಟ ಮೊದಲಾದವರು ಈಗಾಗಲೇ ಪ್ರಕಾಶ್ ಜತೆ ಮಾತುಕತೆ ನಡೆಸಿದ್ದಾರೆ. ಹಲವಾರು ವಿವಾದಗಳಿಗೆ ಗ್ರಾಸವಾಗಿರುವ ಸಿಕೆಪಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ಅದಕ್ಕೆ ಅವಿರೋಧವಾಗಿ ಆಯ್ಕೆ ಮಾಡುವುದಾದರೆ ತಮಗೆ ಒಪ್ಪಿಗೆ ಇದೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
|