ಸುಮಾರು ಒಂದುವರೆ ತಿಂಗಳ ರಾಜಕೀಯ ಕಸರತ್ತಿನ ಬಳಿಕ ಸೋಮವಾರ ಮುಖ್ಯಮಂತ್ರಿ ಗಾದಿಗೆ ಏರಲಿರುವ ಬಿ.ಎಸ್.ಯಡಿಯೂರಪ್ಪ ಈ ತಿಂಗಳ 15 ಅಥವಾ 16ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಕೋರಲಿದ್ದಾರೆ.
ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದನಂತರ ನಡೆಯುವ ಸಂಪುಟ ಸಭೆಯಲ್ಲಿ ವಿಶ್ವಾಸಮತ ಕೋರುವ ದಿನಾಂಕದ ಬಗ್ಗೆ ನಿರ್ಧರಿಸಿ ರಾಜ್ಯಪಾಲರಿಗೆ ಮಾಹಿತಿ ರವಾನಿಸಲಿದ್ದಾರೆ. ವಿಧಾನಸಭೆ ನಡೆಸುವ ಸಂಬಂಧ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ಭಾನುವಾರ ಸಂಪುಟ ವಿಸ್ತರಣೆ ಆಗಲಿದ್ದು, ಉಭಯ ಪಕ್ಷಗಳು ತಮ್ಮ ಪಾಲಿನ ಎಲ್ಲಾ 32 ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ.
ಬಿಜೆಪಿಗೆ 15 ಮತ್ತು ಜೆಡಿಎಸ್ 17 ಸಚಿವ ಸ್ಥಾನಗಳು ದೊರೆಯಲಿವೆ. ಜೆಡಿಎಸ್ ಮಾತ್ರ ಒಂದೇ ಬಾರಿಗೆ ತನ್ನ ಪಾಲಿನ ಎಲ್ಲಾ ಸ್ಥಾನಗಳನ್ನು ತುಂಬಲು ಉತ್ಸುಕವಾಗಿದೆ.
ಆದರೆ, ಬಿಜೆಪಿ ಈ ಬಗ್ಗೆ ಸ್ವಲ್ಪ ಅಳುಕು ವ್ಯಕ್ತಪಡಿಸಿದೆ ಎನ್ನಲಾಗಿದೆ. ಉಭಯ ಪಕ್ಷಗಳು ಮತ್ತೊಮ್ಮೆ ಸಭೆ ಸೇರಿ ಎಲ್ಲಾ ಸ್ಥಾನಗಳನ್ನು ತುಂಬುವ ನಿರ್ಧಾರಕ್ಕೆ ಬಂದರೆ ಅಂದೇ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರಲಿದೆ.
ಮುಂದೆ ಎದುರಾಗಬಹುದಾದ ಸಚಿವಾಕಾಂಕ್ಷಿಗಳ ಅತೃಪ್ತಿಯನ್ನು ಅದುಮಿಡುವ ಸಂಬಂಧ ಉಭಯ ಪಕ್ಷಗಳು ಸಿದ್ಧತೆ ನಡೆಸಿವೆ.
|