ಒಂದು ತಿಂಗಳ ರಾಜಕೀಯ ದೊಂಬರಾಟದ ನಂತರ, ರಾಜ್ಯದಲ್ಲಿ ಮತ್ತೆ ನೂತನ ಸರಕಾರವೊಂದು ಅಸ್ತಿತ್ವಕ್ಕೆ ಬರಲಿದ್ದು, ನೂತನ ಮುಖ್ಯಮಂತ್ರಿಯಾಗಿ ಬೂಕನಕೆರೆ ಯಡ್ಯೂರಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದ ಗದ್ದುಗೆ ಏರಲಿದ್ದು, ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿರುವ ಯಡ್ಯೂರಪ್ಪ ಸೇರಿದಂತೆ ಬಿಜೆಪಿ ಪಾಳಯದಲ್ಲಿ ಎಲ್ಲಿಲ್ಲದ ಹರ್ಷ ಮನೆ ಮಾಡಿದೆ.
ಈ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವಿಧಾನಸೌಧದ ಮುಂಭಾಗ ಭರ್ಜರಿ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ.
ಬೆಳಿಗ್ಗೆ 11ಗಂಟೆಗೆ ನಡೆಯಲಿರುವ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಎಲ್.ಕೆ.ಅಡ್ವಾನಿ, ಯಶವಂತ್ ಸಿನ್ಹಾ ಮತ್ತಿತರರ ದಂಡು ಆಗಮಿಸಲಿದ್ದು, ಇಂದಿನ ಸಮಾರಂಭ ಐತಿಹಾಸಿಕ ದಾಖಲೆ ನಿರ್ಮಿಸಲಿದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಿಜೆಪಿ ಕಾರ್ಯಕರ್ತರ ದಂಡು ತಂಡೋಪತಂಡವಾಗಿ ಆಗಮಿಸಲಿದ್ದರಿಂದ, ಈ ಸಮಾರಂಭ ಶಾಂತಯುತ ಮತ್ತು ಸುಗಮವಾಗಿ ಸಾಗಲು ಎಲ್ಲಾ ರೀತಿಯ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
|