ಮರು ಮೈತ್ರಿ ಮಾಡಿಕೊಂಡು ಹೊಸ ಸರಕಾರ ಸ್ಥಾಪಿಸಲು ಉದ್ಯುಕ್ತವಾಗಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಆರಿಸಬೇಕೆಂದು ಜೆಡಿಎಸ್ ಇನ್ನೂ ನಿರ್ಧರಿಸಿಲ್ಲ.
ಈ ಕುರಿತು ಭಾನುವಾರ ಪಕ್ಷದ ಜೆಡಿಎಸ್ ನಾಯಕರ ಸಭೆ ನಡೆಯಿತಾದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 15ಕ್ಕೆ ಉಪಮುಖ್ಯಮಂತ್ರಿ ಹೆಸರು ಘೋಷಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಬಿಜೆಪಿ ಮುಖ್ಯಮಂತ್ರಿಯಾಗಿ ಮಾಜಿ ಉಪಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಈಗಾಗಲೇ ನೇಮಕಗೊಂಡಿದ್ದಾರೆ. ಆದರೆ ಮುಖ್ಯಮಂತ್ರಿಯಾದವರು ಮತ್ತೆ ಉಪಮುಖ್ಯಮಂತ್ರಿಯಾಗುವುದು ಘನತೆಗೆ ತಕ್ಕ ವಿಚಾರವಲ್ಲ ಎಂಬ ಕಾರಣಕ್ಕೆ ಈ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಲ್ಲೆ ಎಂದಿದ್ದರು.
ಬಹುತೇಕ ಜೆಡಿಎಸ್ ಶಾಸಕರು, ಕುಮಾರಸ್ವಾಮಿಯನ್ನೇ ಉಪಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿದ್ದರೂ, ಈ ಕುರಿತು ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ.
ಸೋಮವಾರ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಜೆಡಿಎಸ್ ಶಾಸಕರು ಹಾಜರಿರುತ್ತಾರಾದರೂ, ಆ ಪಕ್ಷದಿಂದ ಯಾರು ಕೂಡ ಪ್ರಮಾಣವಚನ ಸ್ವೀಕರಿಸುತ್ತಿಲ್ಲ. ವಿಶ್ವಾಸಮತ ಯಾಚನೆಯ ಬಳಿಕವೇ ಉಳಿದವರು ಸಂಪುಟ ಸೇರಿಕೊಳ್ಳುವರು ಎಂದು ಮೂಲಗಳು ಖಚಿತಪಡಿಸಿವೆ.
ನವೆಂಬರ್ 15ರಂದು ವಿಶ್ವಾಸಮತ ಸಾಬೀತಾದ ಬಳಿಕವೇ ಜೆಡಿಎಸ್‌ನಿಂದ 18 ಮಂದಿ ಸಚಿವರು ಪ್ರಮಾಣವಚವನ ಸ್ವೀಕರಿಸುವರು ಮತ್ತು ಉಪಮುಖ್ಯಮಂತ್ರಿ ಯಾರು ಎಂಬುದನ್ನೂ ಘೋಷಿಸಲಾಗುತ್ತದೆ ಎಂದು ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ತಿಳಿಸಿರುವುದಾಗಿ ಮೂಲಗಳು ವರದಿ ಮಾಡಿವೆ.
|