ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೇರುವ ಬಿಜೆಪಿಯ ಬಹುದಿನಗಳ ಕನಸು ನನಸಾಗಿದ್ದು, ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ರಾಜ್ಯಪಾಲರಿಂದ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ಇದರೊಂದಿಗೆ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರಕಾರವು ಮತ್ತೊಂದು ಬಾರಿ ರಾಜ್ಯದಲ್ಲಿ ಅಧಿಕಾರಕ್ಕೇರಿ, ರಾಜಕೀಯ ಅನಿಶ್ಚಿತತೆಗೆ ಅಂತ್ಯ ಹಾಡಿತು.
ವಿಧಾನ ಸೌಧದದಲ್ಲಿ ಬೆಳಿಗ್ಗೆ 12 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ರೈತರ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಬಿಜೆಪಿಯ ಜಗದೀಶ್ ಶೆಟ್ಟರ್, ಆರ್.ಅಶೋಕ್, ವಿ.ಎಸ್.ಆಚಾರ್ಯ ಮತ್ತು ಗೋವಿಂದ ಕಾರಜೋಳ ಅವರು ಸಂಪುಟ ದರ್ಜೆ ಸಚಿವರಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.
ಒಂದು ಲಕ್ಷದಷ್ಟು ಅಂದಾಜು ಸಂಖ್ಯೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ನೆರೆದಿದ್ದು, ಎಲ್ಲೆಡೆ ಬಿಜೆಪಿ ಧ್ವಜ ಹಾರಾಡುತ್ತಿತ್ತು. ಮಾಜಿ ಪ್ರಧಾನಿ, ಮಿತ್ರ ಪಕ್ಷವಾದ ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಅನುಪಸ್ಥಿತಿ ಎದ್ದುಕಾಣುತ್ತಿತ್ತು.
ಜೆಡಿಎಸ್‌ನ ಇತರ ಮುಖಂಡರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಂ.ಪಿ.ಪ್ರಕಾಶ್ ಮತ್ತಿತರರು ಹಾಜರಿದ್ದರಾದರೂ, ಜೆಡಿಎಸ್‌ನಿಂದ ಯಾವುದೇ ಶಾಸಕರು ಪ್ರಮಾಣವಚನ ಸ್ವೀಕರಿಸಿರಲಿಲ್ಲ.
ಎಂ.ಪಿ.ಪ್ರಕಾಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಅವರೊಂದಿಗೆ ಮಾಜಿ ಸಚಿವರಾದ ಮಹಾದೇವ ಪ್ರಸಾದ್ ಮತ್ತು ಸಂತೋಷ್ ಲಾಡ್ ಕೂಡ ಸಚಿವರಾಗುವ ಸಾಧ್ಯತೆಗಳಿವೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಿಜೆಪಿ ಕಾರ್ಯಕರ್ತರ ದಂಡು ತಂಡೋಪತಂಡವಾಗಿ ಆಗಮಿಸಿತ್ತು. ಐದು ನಿಮಿಷ ನಡೆದ ಸರಳ ಸಮಾರಂಭ ರಾಷ್ಟ್ರಗೀತೆ ಜನಗಣ ಮನ ಹಾಡುವ ಮೂಲಕ ಮುಕ್ತಾಯಗೊಂಡಿತು.
|