ಜೆಡಿಎಸ್ 40 ಶಾಸಕರನ್ನು ಅನರ್ಹಗೊಳಿಸಲು ಕೋರಿ ಸಭಾಧ್ಯಕ್ಷರ ಮುಂದೆ ಸಲ್ಲಿಸಿರುವ ಅರ್ಜಿ ಇತ್ಯರ್ಥದಲ್ಲಿ ಮಧ್ಯಪ್ರವೇಶಿಸುವಂತೆ ಹೈಕೋರ್ಟ್ ಮೊರೆ ಹೋಗಲು ವಾಟಾಳ್ ನಾಗರಾಜ್ ಸೇರಿ ಮುವರು ಶಾಸಕರು ನಿರ್ಧರಿಸಿದ್ದಾರೆ.
ತಾವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಭಾಧ್ಯಕ್ಷ ಕೃಷ್ಣ ಅವರು ನ. 17ಕ್ಕೆ ಮುಂದೂಡಿದ್ದಾರೆ. ಅಂದು ತೀರ್ಪು ನೀಡದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗುವುದಾಗಿ ಶಾಸಕ ವಾಟಾಳ್ ನಾಗರಾಜ್ ಹೇಳಿದ್ದಾರೆ.
ತಮ್ಮೊಂದಿಗೆ ಸಿಪಿಎಂ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮತ್ತು ಆರ್‌ಪಿಐ ಶಾಸಕ ಎಸ್.ರಾಜೇಂದ್ರನ್ ಅವರೂ ಇದ್ದಾರೆ ಎಂದು ತಿಳಿಸಿದರು.
ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸಭಾಧ್ಯಕ್ಷರ ಮುಂದೆ ಮತ್ತೊಂದು ಅರ್ಜಿ ಸಲ್ಲಿಸಲಿದ್ದಾರೆ. ಮಾಜಿ ಸಚಿವರಾದ ಸಿಂಧ್ಯ ಮತ್ತು ಎಂ.ಪಿ.ಪ್ರಕಾಶ್ ಅವರನ್ನು ಸಾಕ್ಷಿಗಳಾಗಿ ಪರಿಗಣಿಸುವಂತೆ ಕೋರಲಿದ್ದಾರೆ.
ಸಭಾಧ್ಯಕ್ಷರು ಈಗಾಗಲೇ ಸಭಾಧ್ಯಕ್ಷರು ಈಗಾಗಲೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಸಮನ್ಸ್ ಜಾರಿ ಮಾಡಿದ್ದು, ಕುಮಾರಸ್ವಾಮಿ ನೇತೃತ್ವದ ಶಾಸಕರಿಗೆ ಮಾನ್ಯತೆ ನೀಡದಂತೆ 2006ರ ಜನವರಿಯಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎಂದು ವಾಟಾಳ್ ತಿಳಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದು ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚಿಸಿದ ಕುಮಾರಸ್ವಾಮಿ ಮತ್ತಿತತರ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ಅನರ್ಹತೆ ಕೊರಿ ವಾಟಾಳ್ ನಾಗರಾಜ್, ಸಿಪಿಎಂನ ಜಿ.ವಿ. ಶ್ರೀರಾಮರೆಡ್ಡಿ ಮತ್ತು ಆರ್ಪಿಐನ ರಾಜೇಂದ್ರನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣ ವಿಧಾನಸಭೆ ಸಭಾಧ್ಯಕ್ಷರಿಗೆ ಸಂಬಂಧಿಸಿದ್ದರಿಂದ ಸಭಾಧ್ಯಕ್ಷರೇ ಇತ್ಯರ್ಥ್ಯಪಡಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ನಂತರ ಶಾಸಕರು ಸಭಾಧ್ಯಕ್ಷರ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕಳೆದ 18 ತಿಂಗಳಿನಿಂದ ಇತ್ಯರ್ಥವಾಗದೆ ಬಾಕಿ ಉಳಿದಿದೆ.
|