ಕರ್ನಾಟಕದಲ್ಲಿ ಸೋಮವಾರ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರವು ರಾಜ್ಯ ವಿಧಾನಸಭೆಯಲ್ಲಿ ನವೆಂಬರ್ 23ರಂದು ವಿಶ್ವಾಸ ಮತ ಯಾಚಿಸಲಿದೆ.
ಐವರು ಸದಸ್ಯರ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನಾಲ್ಕು ದಿನಗಳೊಳಗೆ ಸಮ್ಮಿಶ್ರ ಪಾಲುದಾರ ಪಕ್ಷವಾದ ಜೆಡಿಎಸ್‌ನಿಂದ ಯಾರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಸಚಿವರ ಸೇರ್ಪಡೆಯ ಬಳಿಕ ಸದನದಲ್ಲಿ ನಡೆಯುವ ಬಲಾಬಲ ಪರೀಕ್ಷೆಯಲ್ಲಿ ಸರಕಾರವು ತನ್ನ ಬಹುಮತ ಸಾಬೀತುಪಡಿಸಲಿದೆ ಎಂದು ವಿಶ್ವಾಸದಿಂದ ನುಡಿದರು.
ಸಮಾಜದ ಎಲ್ಲಾ ವರ್ಗಗಳ ಹಿತ ಕಾಯುವುದು ಹೊಸ ಸರಕಾರದ ಉದ್ದೇಶ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.
ಬಿಜೆಪಿಯು ಒಮ್ಮತಾಭಿಪ್ರಾಯದ ಮೂಲಕ ಸರಕಾರ ನಡೆಸಿಕೊಂಡು ಹೋಗುವದರಲ್ಲಿ ವಿಶ್ವಾಸ ಹೊಂದಿದೆ ಎಂದು ಯಡಿಯೂರಪ್ಪ ತಿಳಿಸಿದರು.
|