ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಯಡಿಯೂರಪ್ಪ ಮೌನಂ ಶರಣಂ ಗಚ್ಛಾಮಿ!
ತಾಕಲಾಟ ಪೀಕಲಾಟಗಳ ನಡುವೆ ನೆನ್ನೆ ತಾನೇ ಮುಖ್ಯಮಂತ್ರಿ ಗಾದಿಗೇರಿದ ಯಡಿಯೂರಪ್ಪ ಮತ್ತೆ ತಮ್ಮ ದೇವಸ್ಥಾನಗಳ ಯಾತ್ರೆ ಮುಂದುವರಿಸಿದ್ದಾರೆ.

ಆಯಾಸವಾಗಿ ಸಿಕ್ಕಿರುವ ಖುರ್ಚಿಯನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂಬ ದೃಢ ಸಂಕಲ್ಪ ಹೊಂದಿರುವ ಮಾನ್ಯ ಮುಖ್ಯಮಂತ್ರಿಗಳು ರಾಜ್ಯಪಾಲರಿಂದ ಅಂತಿಮ ಅನುಮೋದನೆ ದೊರಕಿದ ಕ್ಷಣದಿಂದ ಇಂದಿನವರೆಗೂ ಒಂದಲ್ಲಾ ಒಂದು ಸ್ವಾಮಿಗಳ, ಗುರುಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದರಲ್ಲಿ ಮಗ್ನರಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.

ಇಂದು ಬೆಳಿಗ್ಗೆ ತಿಪಟೂರಿನ ತಾರಾಡ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಯಡಿಯೂರಪ್ಪನವರು ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಕರಿವೃಷಭ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.

ಸೋಜಿಗದ ಸಂಗತಿಯೆಂದರೆ ಈ ಹಿಂದೆ ಇದೇ ಮಠಕ್ಕೆ ಎಸ್.ಎಂ. ಕೃಷ್ಣರವರು ಸಹ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದು ಅವರ ಮಾತಿನಂತೆ ವಿಧಾನಸೌಧ ತಲುಪವವರೆಗೂ ಮೌನವ್ರತ ಕೈಗೊಂಡಿದ್ದರಂತೆ ಹಾಗಾಗೇ ಅವರು ಅತಂತ್ರದಲ್ಲೂ ಸ್ಥಿರತೆಯನ್ನು ಕಾಪಾಡಿಕೊಂಡು ಅಧಿಕಾರದ ಪೂರ್ಣಾವಧಿಯನ್ನು ಮುಗಿಸಿದರು ಎಂದು ಮಠದ ವಕ್ತಾರರು ನೆನಪಿಸಿಕೊಂಡಿದ್ದರು.

ಎಸ್.ಎಂ. ಕೃಷ್ಣರ ಹಾದಿಯನ್ನೇ ತಾವೂ ತುಳಿಯುವುದಾಗಿ ತಿಳಿಸಿರುವ ಮಾನ್ಯ ಮುಖ್ಯಮಂತ್ರಿಗಳು ವಿಧಾನಸೌಧ ತಲುಪುವವರೆಗೂ ಮೌನವ್ರತ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ ಹಾಗೂ ಅಧಿಕಾರದ ಪೂರ್ಣಾವಧಿಯನ್ನು ಮುಗಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ.

ಆದರೆ ರಾಜಕೀಯ ವಲಯಗಳಲ್ಲಿ ಯಡಿಯೂರಪ್ಪನವರ ಮೌನವ್ರತ ಭಾರೀ ಚರ್ಚೆಗೆ ಗ್ರಾಸವಾಗಿದೆಯಂತೆ. ಬಾಯಿ ಬಿಟ್ಟರೆ ಎಲ್ಲಿ ಬಣ್ಣಗೇಡಾದೀತೋ ಎನ್ನುವ ಹೆದರಿಕೆಯಿಂದ ಹೀಗೆ ವ್ರತದ ಮೊರೆಹೋಗಿರಬಹುದೇ ಎಂದು ಅಲ್ಲಲ್ಲಿ ಗುಸು ಗುಸು ಶುರುವಾಗಿದೆಯಂತೆ.

ಮತ್ತಷ್ಟು
ಮತ್ತೆ ಕಳೆಗಟ್ಟಿದ ವಿಧಾನಸೌಧ
ನೂತನ ಸಿಎಂಗೆ ವಾಜಪೇಯಿ ಅಭಿನಂದನೆ
ಹೊಸ ಸರಕಾರ ವಿಶ್ವಾಸ ಮತ ನ.23ರಂದು
ಮರು ಮದುವೆ: ಮೊದಲ ದಿನವೇ ಅಪಸ್ವರಕ್ಕೆ ಚಾಲನೆ
ಶಾಸಕರ ಅನರ್ಹತೆ ಅರ್ಜಿ: ಹೈಕೋರ್ಟ್‌ನತ್ತ ವಾಟಾಳ್
ಬೀದರ್‌ಗೆ ಬಂದಿಳಿದ ಹಾಕ್ ವಿಮಾನಗಳು