ನೂತನ ಅಸ್ತಿತ್ವಕ್ಕೆ ಬಂದ ಮರುದಿನವೇ ದೋಸ್ತಿ ಸರ್ಕಾರದಲ್ಲಿ ಅಪಸ್ವರ ಕೇಳಿಬಂದಿದೆ. ತಾವು ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಯಡಿಯೂರಪ್ಪ ಅವರು ಹಿರಿಯ ಅಧಿಕಾರಗಳನ್ನು ವರ್ಗಾವಣೆ ಮಾಡಿದ್ದರಿಂದ ಜೆಡಿಎಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಜೆಡಿಎಸ್‌ನೊಂದಿಗೆ ಸಮಾಲೋಚನೆ ನಡೆಸದೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ ಎಂದು ಮಂಗಳವಾರ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಮಧ್ಯಂತರ ಚುನಾವಣೆಯನ್ನು ತಪ್ಪಿಸಲು ಸರ್ಕಾರದ ರಚನೆಗೆ ಬಿಜೆಪಿಗೆ ಬೆಂಬಲ ನೀಡಲಾಗಿದೆಯೇ ಹೊರತು ಅವರ ಇಷ್ಟ ಬಂದಂತೆ ನಡೆಯಲು ಅಲ್ಲ ಎಂದು ಜೆಡಿಎಸ್ ಶಾಸಕರು ಕಿಡಿ ಕಾರಿದರು ಎಂದು ಹೇಳಲಾಗಿದೆ.
ಹಿಂದೆ ಎರಡು ಸರ್ಕಾರಗಳಲ್ಲಿ ಸಚಿವರಾಗಿದ್ದವರ ಪೈಕಿ ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಅವರನ್ನು ಹೊರತು ಪಡಿಸಿ ಉಳಿದವರಿಗೆ ಸಚಿವರಾಗಲು ಅವಕಾಶ ನೀಡಬಾರದು, ಈ ವರೆಗೆ ಸಚಿವರಾಗದವರಿಗೆ ಸಚಿವ ಹುದ್ದೆಗಳನ್ನು ನೀಡಬೇಕು ಎಂದು ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಹೊರಗಿನ ಬೆಂಬಲ ನೀಡಿ ಜೆಡಿಎಸ್‌ನಲ್ಲಿ ಯಾರೂ ಸಚಿವರಾಗಬಾರದು ಎಂದು ಮತ್ತೊಂದು ವರ್ಗವಾದ ಮಂಡಿಸುತ್ತಿದೆ ಎಂದು ತಿಳಿದುಬಂದಿದೆ.
|