ಇದೇ ತಿಂಗಳು 23ರಂದು ಬಹುಮತ ಸಾಬೀತು ಪಡಿಸುವುದಾಗಿ ಘೋಷಿಸಿದ್ದ ಯಡಿಯೂರಪ್ಪನವರ ಮಾತಿಗೆ ವಿರುದ್ಧವಾಗಿ 20 ಕ್ಕೆ ಮುಂಚೆಯೇ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಸೂಚನೆ ಕೊಟ್ಟಿದ್ದಾರೆ.
ರಾಜ್ಯಪಾಲರ ಸೂಚನೆಗೆ ಉತ್ತರವಾಗಿ ಯಡಿಯೂರಪ್ಪನವರು ವರದಿಗಾರರೊಡನೆ ಮಾತಾಡುತ್ತ ಪ್ರಮಾಣ ವಚನ ಸ್ವೀಕರಿಸಿದ ಮೂರೇ ದಿನದೊಳಗಾಗಿ ಬಹುಮತ ಸಾಬೀತು ಪಡಿಸಲು ಸಿದ್ಧನಿದ್ದೇನೆ ಆದರೆ ನಮ್ಮ ಸ್ನೇಹಿತರಾದ ಜೆಡಿ(ಎಸ್) ನೊಂದಿಗೆ ಚರ್ಚಿಸಿ 23ರಂದು ಸಾಬೀತು ಪಡಿಸುವ ಯೋಜನೆಯಿತ್ತು, ಆದರೆ ರಾಜ್ಯಪಾಲರ ಸೂಚನೆಗೆ ನನ್ನ ಸಮ್ಮತಿಯಿದೆ ಎಂದಿದ್ದಾರೆ.
ರಾಜ್ಯಪಾಲರ ಸೂಚನೆಯ ಮೇರೆಯ ತೀವ್ರತೆಯನ್ನು ಮನಗಂಡ ಸರ್ಕಾರ ಇಂದು ಮಧ್ಯಾಹ್ನ 2 ಗಂಟೆಗೆ ತುರ್ತು ಸಚಿವ ಸಂಪುಟ ಸಭೆ ನಡೆಸಿತು. ಸಚಿವ ಸಂಪುಟದ ತುರ್ತುಸಭೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸಲಾಯಿತೆಂದು ಹೇಳಿದರೂ ಸಹ ರಾಜ್ಯಪಾಲರ ಸೂಚನೆಗೆ ಹಾಗೂ ತದನಂತರದ ಕ್ರಮಗಳ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತೆಂದು ಹೇಳಲಾಗಿದೆ.
ಜೆಡಿ(ಎಸ್)ವಲಯದಲ್ಲಿರುವ ವರಿಷ್ಠರ ನಡುವೆ ಸಮಾಲೋಚಿಸಿದ ನಂತರ ಈ ಹಿಂದೆಯೇ ನಿರ್ಧಾರ ಮಾಡಿದಂತೆ ಇದೇ ತಿಂಗಳು 23ರಂದು ಬಹುಮತ ಸಾಬೀತು ಪಡಿಸಲು ಅವಕಾಶ ಕೊಡಬೇಕೆಂದು ಮನವಿ ಪತ್ರ ಸಲ್ಲಿಸುವುದಾಗಿಯೂ ಸಹ ಅವರು ತಿಳಿಸಿದರು.
ಒಂದು ವೇಳೆ ತಮ್ಮ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸದರೆ ಅವರ ಸೂಚನೆಗನುಗುಣವಾಗೇ ಬಹುಮತ ಸಾಬೀತು ಪಡಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.
|