ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಹುಮತ ಸಾಬೀತು ಪಡಿಸಲು ವೇದಿಕೆ ಸಜ್ಜು
ಹೊಸ ಮೈತ್ರಿ ಸರ್ಕಾರ ಅಸ್ತಿತ್ವ ನಿರ್ಧರಿಸುವ ವಿಶ್ವಾಸಮತಕೋರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಮತಚಲಾಯಿಸುವಂತೆ ಜೆಡಿಎಸ್ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿದೆ. ವಿಧಾನಸಭೆಯಲ್ಲಿ 19 ರಂದು ಯಡಿಯೂರಪ್ಪ ನೇತೃತ್ವದ ದೊಸ್ತಿ ಸರ್ಕಾರ ವಿಶ್ವಾಸಮತ ಯಾಚಿಸಲಿದೆ.

ಅದಕ್ಕೂ ಮುನ್ನ ಆಯ್ದ ಜೆಡಿಎಸ್ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ಈ ಮೊದಲು ಆಗಿದ್ದ ನಿರ್ಧಾರದಲ್ಲಿ ಬದಲಾವಣೆಯಾಗಿದೆ.

ಉಪ ಮುಖ್ಯಮಂತ್ರಿ ಸೇರಿ 18 ಮಂದಿ ಜೆಡಿಎಸ್ ಶಾಸಕರು ಈ ತಿಂಗಳ 21ರಂದು ಪ್ರಮಾಣವಚನ ಸ್ವೀಕರಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷ ನಿರ್ಧರಿಸಿದೆ. ಉಪ ಮುಖ್ಯಮಂತ್ರಿ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬುದನ್ನು ಜೆಡಿಎಸ್ ಮುಖಂಡರು ಬಾಯಿ ಬಿಡುತ್ತಿಲ್ಲ.

ಪ್ರಮಾಣ ಸ್ವೀಕಾರದ ಬಳಿಕ ಬಿಜೆಪಿ ತನ್ನ ಸಂಘಟನೆಯನ್ನು ತೋರಿದ ರೀತಿಯಲ್ಲೇ ಜೆಡಿಎಸ್ ತನ್ನ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿದ್ದು, ಅಂದೇ ನಗರದಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಿದೆ. ಆದ್ದರಿಂದ ನಗರದ ಸಾರ್ವಜನಿಕರಿಗೆ 21ರಂದು ಸಹಾ ಪರದಾಟ ತಪ್ಪಿದ್ದಲ್ಲ ಎಂಬುದು ಖಾತ್ರಿ ಯಾಗಿದೆ.

ಅಂದು ಬಿಜೆಪಿ ಶಾಸಕರು ಯಾರೂ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವುದಿಲ್ಲ. ಬದಲಾಗಿ 22 ಅಥವಾ 23ರಂದು ಬಿಜೆಪಿ ತನ್ನ ಎರಡನೆಯ ಹಾಗೂ ಕೊನೆಯ ಕಂತಿನ ಸಂಪುಟವನ್ನು ವಿಸ್ತರಿಸಲಿದೆ.

21ರಂದು ಜೆಡಿಎಸ್ ತನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿರುವುದರಿಂದ ಅಂದೇ ತಮ್ಮ ಪಕ್ಷದ ಕೋಟಾದಂತೆ ಸಚಿವರು ಪ್ರಮಾಣವಚನ ಸ್ವೀಕರಿಸಿದರೆ ಬಿಜೆಪಿ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಮತ್ತೆ ದೋಸ್ತಿ ಸರ್ಕಾರಕ್ಕೆ ತೊಂದರೆ ಎದರಾಗಬಹುದು ಎಂಬ ಭೀತಿಯಿಂದ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಮತ್ತಷ್ಟು
ಚೆಲುವರಾಯಸ್ವಾಮಿ ಮೇಲೆ ರೇವಣ್ಣ ಕೆಂಗಣ್ಣು
ಯಡಿಯೂರಪ್ಪ ವೇಗಕ್ಕೆ ಕುಮಾರ್ ಅಂಕುಶ
ರಾಜ್ಯಪಾಲರಿಗೆ ಕಾಂಗ್ರೆಸ್ ಒತ್ತಡ: ಡಿವಿಎಸ್ ಆರೋಪ
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ
ನ.21ರಂದು ಪ್ರಮಾಣವಚನ:ಕುಮಾರಸ್ವಾಮಿ
ಮಹಿಮಾ ಪಟೇಲರ ಸುವರ್ಣಯುಗ ಆರಂಭ