ನಾಡಿನ ಜೀವನದಿ ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಜಲಾಶಯ ಗರಿಷ್ಠ ಮಟ್ಟ ತಲುಪಿ ನೀರು ಖಾಲಿ ಯಾಗದಂತೆ ನೀರಿನ ಸಂಗ್ರಹವಿದ್ದು, ಇಂದಿಗೆ (ನ.15) ನೂರುದಿನಗಳಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಅಪರೂಪದ ಸಂಗತಿ ಯಾಗಿದೆ.
ಕಾವೇರಿ ನೀರಿಗಾಗಿ ಕರ್ನಾಟಕ-ತಮಿಳುನಾಡಿನ ನಡುವೆ ವಿವಾದ ಮುಂದುವರೆಯುತ್ತಿರುವಾಗ ಇಂತಹದೊಂದು ಸಂಗತಿ ನಾಡಿನ ಜನರಿಗೆ ಖಷಿ ಕೊಟ್ಟಿದೆ. ಈ ಸಾಲಿನ ಆಗಸ್ಟ್ ಏಳರಂದು ತಲುಪಿದ ಜಲಾಶಯದ ಗರಿಷ್ಠ ನೀರಿನ ಮಟ್ಟವನ್ನು ಇಲ್ಲಿಯವರೆಗೆ ಇಳಿದಿಲ್ಲ.
ಕಳೆದ ವರ್ಷ ಇದೇ ದಿನಾಂಕದಂದು ಸಹಾ ಗರಿಷ್ಠ ಮಟ್ಟ ತಲುಪಿತ್ತು. ಕಳೆದ ಜೂನ್‌ನಿಂದ ತಮಿಳನಾಡಿಗೆ ಕಳೆದ ಜೂನ್‌ನಿಂದ ಈ ವರೆಗೆ ಕಾವೇರಿ ನ್ಯಾಯಮಂಡಳಿ ತೀರ್ಪಿನ ಆದೇಶದಂತೆ ನೀಡಬೇಕಾಗಿರುವ ನೀರಿನ ಪಾಲನ್ನು ಕಬಿನಿ ಮತ್ತು ಕಾವೇರಿ ಜಲಾಶಯದಿಂದ ಬಿಡಲಾಗಿದೆ.
ಇದಲ್ಲದೆ ಮೆಟ್ಟೂರು ಜಲಾಶಯ ಕೂಡ ಭರ್ತಿಯಾಗಿರುವುದರಿಂದ ಅಕ್ಟೋಬರ್-ನವೆಂಬರ್‌ನಿಂದಲೇ ನಿರಿನ ಬೇಡಿಕೆಯನ್ನು ಮುಂದಿರಿಸುತ್ತಿದ್ದ ತಮಿಳುನಾಡು ಈ ಬಾರಿ ನೀರು ಬೇಕೆಂದು ಇದುವರೆಗೆ ಚಕಾರವೆತ್ತಿಲ್ಲ.
ತಮಿಳುನಾಡು ಪ್ರದೇಶದಲ್ಲಿ ಸಹಾ ಸಮೃದ್ಧವಾಗಿ ಮಳೆಯಾಗಿರುವುದರಿಂದ ಈ ವರ್ಷ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.
|