ಚಿತ್ರ ವಿಚಿತ್ರ ರಾಜಕೀಯ ಬೆಳವಣಿಗಳ ಮೂಲಕ ರಾಷ್ಟ್ರದ ಗಮನ ಸೆಳೆದಿರುವ ಕರ್ನಾಟಕ ರಾಜಕೀಯ ಇದೀಗ ಮತ್ತೊಂದು ಕ್ಷಿಪ್ರ ಬೆಳವಣಿಗೆ ಕಂಡಿದೆ.
ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿ, ಸರ್ಕಾರ ರಚನೆಗೆ ಅನುವು ಮಾಡಿಕೊಟ್ಟ ಜೆಡಿಎಸ್ ಮತ್ತೆ ಕಾಂಗ್ರೆಸ್‌ನೊಂದಿಗೆ ಮೈತ್ರಿಯ ಕುರಿತು ಮಾತುಕತೆ ನಡೆಸಿದ್ದಾರೆಂಬ ಸುದ್ದಿ ಕುತೂಹಲಕ್ಕೆ ಕಾರಣವಾಗಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದು ಕಾಂಗ್ರೆಸ್‌ನಂತೆ ದೇವೇಗೌಡರಿಗೂ ಇಷ್ಟವಿಲ್ಲ. ಅದರಂತೆ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಚೌಹಾಣ್ ಹಾಗೂ ಸಚಿವ ಪ್ರಿಯರಂಜನ ದಾಸ್‌ಮುನ್ಷಿ ಅವರೊಂದಿಗೆ ದೇವೇಗೌಡರು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಇದು ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡುವ ತಂತ್ರಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಬಿಜೆಪಿ ತನ್ನ ಶಕ್ತಿಯನ್ನು ಪ್ರದರ್ಶಿಸಿತ್ತು. ಇನ್ನು ಅದೇ ಪಕ್ಷದ ನೇತೃತ್ವದಲ್ಲಿ ಸರ್ಕಾರ ನಡೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಮೀರಿ ಬೆಳೆದು ತಾನೇ ಬಹುಮತದ ಸರ್ಕಾರ ರಚನೆ ಮಾಡುವ ಸಾಧ್ಯತೆ ಇರುತ್ತದೆ ಎಂಬುದು ದೇವೇಗೌಡರ ಭೀತಿ ಎನ್ನಲಾಗಿದೆ.
ಅದಲ್ಲದೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟ ಜೆಡಿಎಸ್‌ಗೆ ರಾಜಕೀಯದಲ್ಲಿ ಕೆಟ್ಟ ಹೆಸರು ಬರಲಿದೆ ಎನ್ನುವುದು ದೇವೇಗೌಡರ ಅಭಿಮತ ಎನ್ನಲಾಗಿದೆ.
|