ಜಿಲ್ಲೆಯನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 17ರ ದುರವಸ್ಥೆ ಪ್ರತಿಭಟಿಸಿ ಇತ್ತೀಚಿಗೆ ನಡೆದ 12 ಗಂಟೆ ಹೆದ್ದಾರಿ ಬಂದ್‌ನ ಬಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೊನೆಗೂ ತಟ್ಟಿದಂತೆ ಕಾಣುತ್ತಿದೆ.
ಬಂದ್ ಪರಿಣಾಮವಾಗಿ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಉಡುಪಿಗೆ ಆಗಮಿಸಿ ಹೆದ್ದಾರಿ ದುರವಸ್ಥೆ ಪರೀಶೀಲಿಸಿ, ಸರ್ಕಾರಕ್ಕೆ ವರದಿ ನೀಡುವ ಭರವಸೆ ನೀಡಿದ್ದಾರೆ. ಈ ಮಧ್ಯೆ, ಸುಮಾರು 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಹೆದ್ದಾರಿ ಸಂಪೂರ್ಣವಾಗಿ ಅಲ್ಲದಿದ್ದರೂ ಕೆಟ್ಟಿರುವಲ್ಲಿ ತೇಪೆ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ತೇಪೆ ಕಾರ್ಯ ಈಹಿಂದೆ ನಡೆದಿತ್ತು. ಅದು ಕಳಪೆಯಾಗಿದ್ದರಿಂದ ಹೆದ್ದಾರಿ ಇಂದು ಸಂಚಾರಕ್ಕೆ ಆಯೋಗ್ಯವಾಗಿದೆ. ಆದ್ದರಿಂದ ತೇಪೆ ಹಾಕುವ ಕಾಮಗಾರಿ ಬೇಡ, ಸಂಪೂರ್ಣ ಡಾಂಬರೀಕರಣವೇ ನಡೆಯಬೇಕು ಎನ್ನುವುದು ಹೆದ್ದಾರಿ ಹೋರಾಟ ಸಮಿತಿಯ ಪಟ್ಟು.
ರಾಜ್ಯ ರಾಜಕಾರಣದಲ್ಲಿಯೇ ಮುಳುಗಿರುವ ಸಚಿವ-ಶಾಸಕರ ವಿರುದ್ಧವೇ ಇದೀಗ ಹೋರಾಟ ಸಮಿತಿ ಮತ್ತೊಂದು ಹೋರಾಟ ಸಂಘಟಿಸುವ ಬಗ್ಗೆ ಸೂಚನೆಗಳನ್ನು ನೀಡಿದೆ.
ಬಹುಶಃ ತಾವು ಆರಿಸಿದ ಜನಪ್ರತಿನಿಧಿಗಳ ವಿರುದ್ಧ ಮತದಾರರ ಹಕ್ಕಾದ ಮೂಲಭೂತ ಸೌಕರ್ಯಗಳನ್ನು ಪಡೆಯುವುದಕ್ಕೆ ಹೋರಾಟ ನಡೆಸಬೇಕಾಗಿರುವುದು ಪ್ರಜಾಪ್ರಭುತ್ವದ ದುರಂತ. ನಮ್ಮ ಸರ್ಕಾರ ಮತ್ತು ಜನಪ್ರತಿನಿಧಿಗಳು ಹೀಗಾಗುವುದಕ್ಕೆ ಅವಕಾಶ ನೀಡಬಾರದು ಎಂದು ಹೋರಾಟಗಾರರ ಮನವಿಯಾಗಿದೆ.
|