ಬಿಜೆಪಿ ನೇತೃತ್ವದ ಮೈತ್ರಿ ಸರಕಾರ ವಿಧಾನಸಭೆಯಲ್ಲಿ ಈ ತಿಂಗಳ 19ರಂದು ಬಹುಮತ ಸಾಬೀತು ಪಡಿಸುವವರೆಗೆ ಯಾವುದೇ ಷರತ್ತುಗಳಿಗೆ ಒಪ್ಪಿಕೊಳ್ಳದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಜೆಪಿ ರಾಷ್ಟ್ರೀಯ ಮುಖಂಡರು ತಾಕೀತು ಮಾಡಿದ್ದಾರೆ.
ಸರ್ಕಾರದಲ್ಲಿ ದೋಸ್ತಿ ಪಕ್ಷವಾದ ಜೆಡಿಎಸ್ ತಂತ್ರಕ್ಕೆ ಮಣಿಯಬೇಡಿ ಎಂದು ಸಲಹೆ ನೀಡಿದ್ದಾರೆ.
ಬಿಜೆಪಿಗೆ ಮೊದಲಿನಿಂದಲೇ ಸಮಸ್ಯೆ ಸೃಷ್ಟಿಸುತ್ತಲೇ ಬಂದಿರುವ ಜೆಡಿಎಸ್ ಈ ಬಾರಿಯೂ ಎಲ್ಲಾ ತಂತ್ರಗಳನ್ನು ಬಳಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಹಾ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಬಹುಮತ ಸಾಬೀತುಪಡಿಸುವವರೆಗೆ ತಾವು ಯಾವುದೇ ಒಡಂಬಡಿಕೆ ಪತ್ರಗಳಿಗೆ ಸಹಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೊದಲು 20 ತಿಂಗಳ ಹಿಂದೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾದಾಗಲೂ ಬಿಜೆಪಿ ಯಾವುದೇ ಪತ್ರಕ್ಕೆ ಸಹಿ ಮಾಡಿಲ್ಲ. ಪರಸ್ಪರ ವಿಶ್ವಾಸ ಹೊಂದಿ ಉಭಯ ಪಕ್ಷಗಳು ಸಮ್ಮಿಶ್ರ ಸರ್ಕಾರವನ್ನು ನಡೆಸಿವೆ ಎಂದೂ ಹೇಳಿದ್ದಾರೆ.
ದೇವೇಗೌಡರು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ನೀಡಿರುವ ಪತ್ರದಲ್ಲಿರುವುದು ಸಲಹೆಗಳಷ್ಟೇ ಹೊರತು ಷರತ್ತುಗಳಲ್ಲ ಎಂದು ಹೇಳಿದ್ದಾರೆ.
ತಾವು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದನಂತರವಷ್ಟೇ ಈ ಸಲಹೆಗಳ ಬಗ್ಗೆ ದೇವೇಗೌಡರ ಜತೆ ಸಮಾಲೋಚನೆ ನಡೆಸುವುದಾಗಿ ತಿಳಿಸುವುದರೊಂದಿಗೆ ಈ ವಿಷಯದಲ್ಲಿ ತಮ್ಮ ಖಚಿತ ಅಭಿಪ್ರಾಯವನ್ನು ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ.
ದೇವೇಗೌಡರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ ಬಗ್ಗೆ ತಲೆ ಕೆಡಿಸುಕೊಳ್ಳುವ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ.
ಹೊಸ ಮೈತ್ರಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ಘೋಷಿಸಿ ಆಗಿದೆ. ಇನ್ನು ಬೆಂಬಲ ವಾಪಸ್ ಪಡೆಯಲಾರದಷ್ಟು ದೂರ ಕ್ರಮಿಸಿದೆ ಎಂಬುದು ಬಿಜೆಪಿ ರಾಷ್ಟ್ರೀಯ ನಾಯಕರ ಅಭಿಮತ.
|