ತಮ್ಮ ಷರತುಗಳಿಗೆ ಒಪ್ಪಿ ಸಂಬಂಧಪಟ್ಟ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಿದರೇನೇ ತಮ್ಮ ಪಕ್ಷ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗಿರುವ ಬಹುಮತ ಸಾಬೀತು ಪಡಿಸಲು ಸಹಕರಿಸುತ್ತದೆ ಎಂದು ಸಾರುವ ಜೆಡಿಎಸ್ ಸಿದ್ಧಪಡಿಸಿದ ಪತ್ರಗಳು ಅಲ್ಲಲ್ಲಿ ಕಾಣಸಿಗುತ್ತಿವೆ.
ಜೆಡಿಎಸ್ ವರಿಷ್ಠ ದೇವೇಗೌಡ ಈ ಹಿಂದೆ ಬಿಜೆಪಿಗೆ ನೀಡಿದ್ದ 12 ಅಂಶಗಳ ಪೈಕಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಎರಡು ಅಂಶಗಳನ್ನು ಕೈಬಿಟ್ಟಿದ್ದು, ಮತ್ತೆ 11 ಹೊಸ ಅಂಶಗಳನ್ನು ಸೇರಿಸಿ ಒಪ್ಪಂದದ ಪತ್ರವನ್ನು ಸಿದ್ಧಪಡಿಸಲಾಗಿದೆ.
ಈ ಷರತ್ತುಗಳನ್ನೊಳಗೊಂಡ ಪತ್ರಗಳಿಗೆ ಸಹಿ ಹಾಕಿದರೆ ಮಾತ್ರ ತಮ್ಮ ಶಾಸಕರು ಮತ ಹಾಕಲಿದ್ದಾರೆ ಎಂದು ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ಷರತ್ತುಗಳಿಗೆ ಒಪ್ಪದಿದ್ದಲ್ಲಿ ಗಂಭೀರ ಪರಿಣಾಮ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಬಿಜೆಪಿ ತಮ್ಮ ಮಾತು ಕೇಳದಿದ್ದಲ್ಲಿ ತಾವು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಅದರಲ್ಲಿ ಪ್ರಮುಖವಾಗಿ ಸೇರ್ಪಡೆಗೊಂಡಿರುವ ಷರತ್ತುಗಳೆಂದರೆ ಬಿಡಿಎ, ಬಿಎಂಐಸಿ ಕಾರಿಡಾರ್ ಯೋಜನೆ ಸೇರಿದಂತೆ ನಗರಾಭಿವೃದ್ದಿ, ಗಣಿ ಮತ್ತು ಭೂವಿಜ್ಞಾನ ಖಾತೆಗಳನ್ನು ಜೆಡಿಎಸ್‌ಗೆ ನೀಡುವುದು, ಕರ್ನಾಟಕ ಅಭಿವೃದ್ದಿ ರಂಗದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಡಿ.ವಿ.ಸದಾನಂದಗೌಡ ಅವರನ್ನು ನೇಮಕ ಮಾಡುವುದು, ವಿಧಾನಸಭಾಧ್ಯಕ್ಷ ಸ್ಥಾನ ಜೆಡಿಎಸ್ ಉಳಿಸಿಕೊಂಡರೆ, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವುದು, ವಿಧಾನಪರಿಷತ್ತಿನ ಸಭಾಪತಿ ಸ್ಥಾನ ಬಿಜೆಪಿಗೆ, ಉಪ ಸಭಾಪತಿ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿದೆ.
ಲಿಖಿತವಾಗಿ ಅಲ್ಲದೆ ಮೌಖಿಕವಾಗಿ ಜೆಡಿಎಸ್ ವಿಧಿಸಿದ ಕೆಲ ಷರತ್ತುಗಳು ಬಿಜೆಪಿ ಮುಂದಿವೆ. ಅವುಗಳಲ್ಲಿ ರಾಜ್ಯ ರಾಜಕೀಯವನ್ನು ತಲ್ಲಣಗೊಳಿಸಿದ ಗಣಿ ಲಂಚ ಪ್ರಕರಣ, ಮಾಜಿ ಸಚಿವ ಶ್ರೀರಾಮುಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ದಾಖಲಿಸಿರುವ ಕೊಲೆ ಪ್ರಯತ್ನ ಮೊಕದ್ದಮೆ ವಾಪಸ್ ಪಡೆಯುವುದೂ ಸೇರಿವೆ ಎಂದು ಹೇಳಲಾಗಿದೆ.
ಇದೇ ವೇಳೆ, ಬಿಡದಿಯ ಡಿಎಲ್ಎಫ್ ಯೋಜನೆ, ಮೋನೋ ರೈಲು ಯೋಜನೆಗೆ ಅಡ್ಡ ಬರಬಾರದು ಎಂಬ ಅಂಶಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆಯಲ್ಲಿ 19ರಂದು ವಿಶ್ವಾಸಮತ ಯಾಚನೆ ಮಾಡುವ ಕಾರ್ಯಕ್ರಮ ಇರುವುದರಿಂದ ಜೆಡಿಎಸ್ ಶಾಸಕರನ್ನು ಮತ್ತೆ ರೆಸಾರ್ಟ್ ಒಂದಕ್ಕೆ ಕರೆದೊಯ್ಯಲಾಗಿದೆ.
|