ಅಧಿಕಾರ ಹಸ್ತಾಂತರಿಸಲು ಈ ಹಿಂದೆ ಜೆಡಿಎಸ್ ನಿರಾಕರಿಸಿದಾಗ ಧರ್ಮಯಾತ್ರೆಗೆ ಹೊರಟಿದ್ದ ಯಡಿಯೂರಪ್ಪ, ಮುಖ್ಯಮಂತ್ರಿಯಾದ ಬಳಿಕವೂ ಧರ್ಮಯಾತ್ರೆ ಮುಂದುವರಿಸಿದ್ದು, ಶನಿವಾರ ಜಮ್ಮು ಸನಿಹದ ತೀರ್ಥಕ್ಷೇತ್ರ ವೈಷ್ಣೋದೇವಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಾವು ಉಪ ಮುಖ್ಯಮಂತ್ರಿಯಾಗಿರುವಾಗ ಹಣಕಾಸು ಸಚಿವರಾಗಿ ಮಠಗಳಿಗೆ ಹಾಗೂ ದೇವಸ್ಥಾನಗಳಿಗೆ ಯಥೇಚ್ಚವಾಗಿ ಹಣ ಒದಗಿಸಿದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಠಗಳಿಗೆ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ವಿವಿಧ ಸ್ವಾಮೀಜಿಗಳ ಕಾಲಿಗೆ ಬಿದ್ದು, ಆಶೀರ್ವಾದ ಪಡೆಯುತ್ತಿದ್ದಾರೆ.
ಇದೇ ತಿಂಗಳ ಎಂಟರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಅಂತ್ಯಗೊಳಿಸಿ ಸರ್ಕಾರ ರಚಿಸುವಂತೆ ತಮ್ಮನ್ನು ಆಹ್ವಾನಿಸುವ ಕೇಂದ್ರ ಸರ್ಕಾರದ ನಿರ್ಧಾರ ತಮ್ಮ ಕಿವಿಗೆ ಬಿದ್ದ ಕ್ಷಣದಲ್ಲಿ ವೈಷ್ಣೋದೇವಿಯ ದರ್ಶನ ಪಡೆಯುತ್ತಿದ್ದೆ ಎಂದು ಯಡಿಯೂರಪ್ಪ ಅವರೇ ಹೇಳಿಕೊಂಡಿದ್ದರು.
ತಮ್ಮ ಮೊರೆಯನ್ನು ಮನ್ನಿಸಿದ ದೇವಿಗೆ ಮತ್ತೊಮ್ಮೆ ವಂದಿಸಲು (ಹರಕೆ ತೀರಿಸಲು) ಮುಖ್ಯಮಂತ್ರಿ ಮಗನೊಂದಿಗೆ ತೆರಳಿದ್ದರು.
|