ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಲುಜೆಡಿಎಸ್ ಪಕ್ಷವು ಹೊಸ ಷರತ್ತುಗಳನ್ನು ಹೇರಿ ಇಕ್ಕಟ್ಟಿಗೆ ಸಿಕ್ಕಿಸಿರುವ ನಡುವೆ, ಬಿಜೆಪಿ ಕೇಂದ್ರ ನಾಯಕರು ಪಕ್ಷದ ಹಿರಿಯ ನಾಯಕ ಯಶವಂತ ಸಿನ್ಹಾ ಅವರನ್ನು ಬೆಂಗಳೂರಿಗೆ ಸಂಧಾನಕಾರರಾಗಿ ಕಳಿಸಿದ್ದಾರೆ.
ಉದ್ಭವಿಸಿರುವ ಪ್ರಸಕ್ತ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಿನ್ಹಾ ಅವರು ಜೆಡಿಎಸ್ ನಾಯಕರ ಜತೆ ಮಾತುಕತೆ ನಡೆಸುವರೆಂದು ನಿರೀಕ್ಷಿಸಲಾಗಿದೆ. ಯಡಿಯೂರಪ್ಪ ಸರ್ಕಾರಕ್ಕೆ ಬೆಂಬಲ ನೀಡಬೇಕಾದರೆ ರಾಜಕೀಯ ಒಡಂಬಡಿಕೆ ಪತ್ರಕ್ಕೆ(ಎಂಒಯು) ಸಹಿ ಹಾಕಬೇಕೆಂದು ಜೆಡಿಎಸ್ ತಾಕೀತು ಮಾಡಿರುವುದು ಬಿಜೆಪಿಗೆ ತಲೆನೋವು ತಂದಿಟ್ಟಿದೆ.
ಎಂಒಯುಗೆ ಸಹಿ ಹಾಕಲು ಜೆಡಿಎಸ್ ಭಾನುವಾರ ಅಂತಿಮ ಗಡುವೆಂದು ಗೊತ್ತುಮಾಡಿದ್ದು, ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ಕೂಡ ಕರೆದಿದೆ. ಸಮ್ಮಿಶ್ರ ಸರ್ಕಾರವನ್ನು ಮುಂದಿನ 19 ತಿಂಗಳವರೆಗೆ ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಎಂಒಯು ಮಾರ್ಗದರ್ಶಕ ಅಂಶ ಎಂದು ಜೆಡಿಎಸ್ ಹೇಳುತ್ತಿದೆ.
ಸೋಮವಾರ ಯಡಿಯೂರಪ್ಪ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಕೋರಲಿದೆ. ಈ ನಡುವೆ ಎಂಒಯುಗೆ ಸಹಿ ಮಾಡುವುದು ಕಡ್ಡಾಯ ಎಂದು ದೇವೇಗೌಡರು ಬಿಜೆಪಿ ನಾಯಕತ್ವಕ್ಕೆ ದೃಢವಾದ ಸಂದೇಶ ರವಾನಿಸಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ. ಎಂಒಯುಗೆ ಸಹಿ ಹಾಕುವ ಬಗ್ಗೆ ಇಲ್ಲಿಯವರೆಗೆ ಬಿಜೆಪಿಯು ದಿವ್ಯ ಮೌನ ವಹಿಸಿದ್ದು ಕೂಡ ದೇವೇಗೌಡರನ್ನು ಕೆರಳಿಸಿದೆ.
ಈ ಮುಂಚೆ 12 ಸೂತ್ರಗಳ ಪಟ್ಟಿ ಕಳಿಸಿದ್ದ ದೇವೇಗೌಡರ ಎಂಒಯುನಲ್ಲಿ ಈಗ 21 ಬೇಡಿಕೆಗಳು ಸೇರ್ಪಡೆಯಾಗಿದೆ. ಆದರೆ ಬಿಜೆಪಿ ಮಾತ್ರ ಗೌಡರ ಸೂತ್ರಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಅವೆಲ್ಲ ಕೇವಲ ಸಲಹೆಗಳಾಗಿದ್ದು ಚರ್ಚೆಯ ಮೂಲಕ ಬಗೆಹರಿಸಬಹುದೆಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದರು.
20 ತಿಂಗಳ ಮುಂಚೆ ಸರ್ಕಾರ ರಚನೆ ಮಾಡುವಾಗ ಮಾಡಿಕೊಂಡ ಅಧಿಕಾರ ಹಂಚಿಕೆಯ ಒಪ್ಪಂದ ಈಗಲೂ ಕಾನೂನುಬದ್ದವೆನಿಸಿದ್ದು ಅದರಿಂದ ಜಾರುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಕಾಂಗ್ರೆಸ್ ಜತೆ ಕೂಡ ಜೆಡಿಎಸ್ ಸಂಪರ್ಕ ದ್ವಾರವನ್ನು ತೆರೆದು ವಿಷಯವನ್ನು ಇನ್ನಷ್ಟು ಜಟಿಲಗೊಳಿಸಿದ್ದನ್ನು ಒತ್ತಡ ತಂತ್ರ ಎಂದು ಬಿಜೆಪಿ ಭಾವನೆಯಾಗಿದೆ.
|