ಭಾರತೀಯ ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠ ಮತ್ತೊಂದು ಅನೂಹ್ಯ ಕಲ್ಪನೆಯನ್ನು ಸಾಕಾರಗೊಳಿಸ ಹೊರಟಿದೆ. ವಿಶ್ವ ಗೋ ಸಮ್ಮೇಳನದಂಥ ಜಾಗತಿಕ ಹಬ್ಬವನ್ನು ಯಶಸ್ವಿಗೊಳಿಸಿ ಇದೀಗ `ಕೋಟಿ ನೀರಾಜನ'ಕ್ಕೆ ನಗರ ಸಜ್ಜುಗೊಂಡಿದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಚಿಂತನೆಯ ಈ ಕಾರ್ಯಕ್ರಮ ಇಂದು ಮಧ್ಯಾಹ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಳ್ಳಲಿದೆ . ಭಾರತೀಯ ಬದುಕಿನ ಜೀವಾಳವಾಗಿರುವ ಗೋ ಸಂತತಿಯ ಉಳಿವು ಇಲ್ಲಿನ ಜನ ಮಾನಸದ ಇಚ್ಛಾ ಶಕ್ತಿಯ ಮೇಲೆ ನಿಂತಿದೆ. ಈ ದಿಸೆಯಲ್ಲಿ ಜನ ಸಾಮಾನ್ಯರ ಮನಃಪರಿವರ್ತನೆಯಾದರೆ ತಂತಾನೇ ಗೋವುಗಳು ನೆಮ್ಮದಿಯನ್ನು ಕಾಣುತ್ತವೆ ಎಂದು ಆರಂಭದಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ ಸ್ವಾಮೀಜಿ, ಭಾವ ಜಾಗರಣದ ಸೂಕ್ಷ್ಮ ಹೆಜ್ಜೆಗಳನ್ನು ಇಡಲಾರಂಭಿಸಿದ್ದಾರೆ.
ಆಂದೋಲನಕ್ಕೆ ಸಾಂಸ್ಕ್ಕತಿಕ ಸ್ವರೂಪ ನೀಡುವ ಮೂಲಕ ದೇಶವಾಸಿಗಳ ಹೃದಯದಲ್ಲಿ ಗೋವಿನ ಕುರಿತಾಗಿ ಪ್ರೀತ್ಯಾದರಗಳನ್ನು ಮೂಡಿಸುವುದರೊಂದಿಗೆ ಈ ನೆಲದ ಧಾರ್ಮಿಕ ಪರಂಪರೆಯ ತಳಹದಿಯ ಮೇಲೆ ಸಮಾಜವನ್ನು ಗುರಿಯೆಡೆಗೆ ಸಂಘಟಿಸಲು ಯೋಜಿಸಿದ್ದಾರೆ.
ಅದರ ಒಂದು ಭಾಗವೇ `ಕೋಟಿ ನೀರಾಜನ'.. ಇನ್ನು ಆಂದೋಲನದ ಮುಖ್ಯವಾಹಿನಿಯಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಗುರುತಿಸುವುದು ತಮ್ಮ ಉದ್ದೇಶ ಎಂದು ಶ್ರೀಗಳು ಮಾಧ್ಯಮಗಳೊಮದಿಗೆ ತಿಳಿಸಿದ್ದಾರೆ.
ಇದುವರೆಗೆ ನಾಡಿನ ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ, ಕೆಲವೇ ಪ್ರದೇಶದಲ್ಲಷ್ಟೇ ಸಾಸ್ಥಿಕ ಸ್ವರೂಪ ಪಡೆದುಕೊಂಡಿದ್ದ ಗೋ ಸಂರಕ್ಷಣೆ ಆಂದೋಲನವನ್ನು ರಾಜಧಾನಿ ಬೆಂಗಳೂರಿಗೂ ವಿಸ್ತರಿಸುವ ಮೂಲಕ ವ್ಯಾಪಕಗೊಳಿಸುವುದು ಕಾರ್ಯಕ್ರಮದ ಇನ್ನೊಂದು ಪ್ರಮುಖ ಉದ್ದೇಶ. ಇಂಥ ಆಶಯಗಳನ್ನು ಹೊತ್ತ ಈ ಕಾರ್ಯಕ್ರಮದಲ್ಲಿ ಇಂದು ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ನವೆಂಬರ್ 18ರ ಮುಸ್ಸಂಜೆಗೆ ಬೆಂಗಳೂರಿನ ಅರಮನೆ ಮೈದಾನವನ್ನು ಬೆಳಗಲಿದ್ದಾರೆ.
|