ಕೇವಲ 6 ದಿನಗಳ ಕೂಸಾದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಭವಿಷ್ಯ ಈಗ ತೂಗುಯ್ಯಾಲೆ ಆಡುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ವಿಶ್ವಾಸಮತ ಕೋರುವ ಮುನ್ನ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲೇಬೇಕೆಂದು ಮಿತ್ರ ಪಕ್ಷ ಜೆಡಿಎಸ್ ಎಚ್ಚರಿಕೆ ನೀಡಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಿರ್ಣಾಯಕ ಸಭೆ ಭಾನುವಾರ ನಡೆದು ಎಂಒಯುಗೆ ಸಹಿ ಹಾಕಲು ಬಿಜೆಪಿ ನಿರಾಕರಿಸಿದ ಪಕ್ಷದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಪಕ್ಷದ ವರಿಷ್ಠ ದೇವೇಗೌಡ ಮತ್ತು ಪುತ್ರ ಕುಮಾರಸ್ವಾಮಿ ಅವರನ್ನು ಕೋರಲು ಸರ್ವಾನುಮತದ ನಿರ್ಣಯ ತೆಗೆದುಕೊಂಡಿತು.
ಸರ್ಕಾರದ ಸೂಸೂತ್ರ ನಿರ್ವಹಣೆಗೆ ಇಂತಹ ಒಪ್ಪಂದ ಅಗತ್ಯವೆಂದು ಕುಮಾರಸ್ವಾಮಿ ಸಭೆಯಿಂದ ಹೊರಗೆ ಬಂದ ಬಳಿಕ ಶಾಸಕರಿಗೆ ವಿವರಿಸಿದರು. ಬಿಜೆಪಿ ಎಂಒಯುಗೆ ಸಹಿ ಹಾಕಲು ನಿರಾಕರಿಸಿದರೆ ಮುಂದಿನ ಕ್ರಮವನ್ನು ನಿರ್ಧರಿಸಲು ಮೂವರು ಸದಸ್ಯರ ಮುಖ್ಯ ಸಮಿತಿಯನ್ನು ಕೂಡ ರಚಿಸಿರುವುದಾಗಿ ಅವರು ಹೇಳಿದರು. ಮುಖ್ಯ ಸಮಿತಿಯಲ್ಲಿ ಪಕ್ಷದ ನಾಯಕರಾದ ಎಂ.ಪಿ. ಪ್ರಕಾಶ್, ಡಿ.ಮಂಜುನಾಥ್ ಮತ್ತು ಮಿರಾಜುದ್ದೀನ್ ಪಟೇಲ್ ಇರುತ್ತಾರೆಂದು ಅವರು ಹೇಳಿದರು.
ಇಂದು ಸಂಜೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಜೆಡಿಎಲ್‌ಪಿಯ ನಿರ್ಧಾರವನ್ನು ತಿಳಿಸಿ ಎಂಒಯು ಪ್ರತಿಯನ್ನು ಸಲ್ಲಿಸುವುದಾಗಿ ಕುಮಾರಸ್ವಾಮಿ ಹೇಳಿದರು. ಎಂಒಯುಗೆ ಸಹಿ ಹಾಕಬೇಕೆಂಬ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಹೇಳಿದ ಅವರು, ಪಕ್ಷದ ವರಿಷ್ಠ ದೇವೇಗೌಡರ ಷರತ್ತುಗಳು ಚೌಕಾಸಿ ಮಾಡುವಂತದ್ದಲ್ಲ ಮತ್ತು ಬಿಜೆಪಿ ಷರತ್ತುಗಳಿಗೆ ತಲೆಬಾಗದಿದ್ದರೆ ಯಾವುದೇ ಪರಿಣಾಮ ಎದುರಿಸಲು ಪಕ್ಷವು ಸಿದ್ಧವಾಗಿದೆ ಎಂದು ಅವರು ನುಡಿದರು. . ಮೂಲಗಳ ಪ್ರಕಾರ, ಬಿಜೆಪಿ ಎಂಒಯುಗೆ ಸಹಿ ಹಾಕದಿದ್ದರೆ ಬೆಂಬಲ ಹಿಂತೆಗೆದುಕೊಳ್ಳಲು ಪಕ್ಷದ ವರಿಷ್ಠ ದೇವೇಗೌಡರು ಸಭೆಯಲ್ಲಿ ಒಲವು ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
|