ಸುಖ ಸರಕಾರಕ್ಕೆ 12 ಸಲಹೆಗಳೋ, ಷರತ್ತುಗಳೋ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲವಾದರೂ, ಇವುಗಳುಳ್ಳ ಒಪ್ಪಂದ ಪತ್ರಕ್ಕೆ ಸಹಿ ಹಾಕಲು ಬಿಜೆಪಿ ನಿರಾಕರಿಸಿರುವುದರಿಂದ ವಿಶ್ವಾಸಮತದ ವಿರುದ್ಧ ಮತ ಚಲಾಯಿಸುವಂತೆ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ ಶಾಸಕರಿಗೆ ಸೂಚಿಸಿರುವುದು ಕುತೂಹಲಕ್ಕೆ ಎಡೆ ಮಾಡಿದೆ.
ದಿನಕ್ಕೊಂದು ಪ್ರಹಸನಗಳಿಂದ ದೇಶದ ಮಾತ್ರವಲ್ಲದೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುತ್ತಿರುವ ಕರ್ನಾಟಕ ರಾಜಕಾರಣಿಗಳು ಇಂದು ಯಡಿಯೂರಪ್ಪ ವಿಶ್ವಾಸ ಮತ ಕೋರಿದಾಯ ಯಾವ ರೀತಿಯ ಫಲಿತಾಂಶಕ್ಕೆ ಕಾರಣವಾಗಲಿದ್ದಾರೆ ಎಂಬುದು ಆಸಕ್ತಿಯ ಸಂಗತಿಯಾಗಿದೆ.
ಅಧಿಕಾರ ಹಂಚಿಕೆಯ ಚರ್ಚೆ ವಿಫಲವಾಗಿದ್ದು, ಜೆಡಿಎಸ್ ಶಾಸಕರು ಯಡಿಯೂರಪ್ಪ ಮಂಡಿಸುವ ವಿಶ್ವಾಸಮತ ಗೊತ್ತುವಳಿಯ ವಿರುದ್ಧ ಮತ ಚಲಾಯಿಸುವರು ಎಂದು ದೇವೇಗೌಡರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದರೊಂದಿಗೆ ಅಧಿಕಾರ ಸ್ವೀಕರಿಸಿ ಇನ್ನೂ ಒಂದು ವಾರವಾಗುವಷ್ಟರಲ್ಲೇ ಬಿಜೆಪಿ ನೇತೃತ್ವದ ಸರಕಾರದ ಭವಿಷ್ಯ ಅಲುಗಾಡತೊಡಗಿದೆ.
ತಮ್ಮ ಪಕ್ಷದ ಒತ್ತಡ ತಂತ್ರಗಳಿಗೆ ಮಣಿಯದಿರಲು ಬಿಜೆಪಿ ನಾಯಕತ್ವ ನಿರ್ಧರಿಸಿರುವುದು ದೇವೇಗೌಡರಿಗೆ ನುಂಗಲಾರದ ತುತ್ತಾಗಿದ್ದು, ಇದರಿಂದಾಗಿ ಅವರು ಗಟ್ಟಿ ಮನಸ್ಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
|