ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವೈಮನಸ್ಯಕ್ಕೆ ಹೇತುವಾದ "ಗಣಿ": ಸಿನ್ಹಾ ಬೆಂಗಳೂರಿಗೆ
ವಿಶ್ವಾಸಮತಕ್ಕೆ ಮುನ್ನ 12 ಅಂಶಗಳ ಷರತ್ತುಗಳಿಗೆ ಛಾಪಾ ಕಾಗದದಲ್ಲಿ ಸಹಿ ಹಾಕಬೇಕು ಎಂದು ಜೆಡಿಎಸ್ ತಗಾದೆ ತೆಗೆದ ಹಿನ್ನೆಲೆಯಲ್ಲಿ, ಉಭಯ ಮಿತ್ರ ಪಕ್ಷಗಳ ನಡುವಿನ ಅಸಮಾಧಾನ ಶಮನದ ಕುರಿತ ಮಾತುಕತೆಯು ವಿಫಲವಾಯಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ಮಾತುಕತೆ ಮುರಿದುಬಿದ್ದಿದ್ದು, ಇಂದು ವಿಶ್ವಾಸಮತದ ವಿರುದ್ಧ ಜೆಡಿಎಸ್ ಶಾಸಕರು ಮತ ಚಲಾಯಿಸಲಿದ್ದಾರೆ ಎಂದು ತಿಳಿದುಬಂದಿದೆ.

12 ಷರತ್ತುಗಳನ್ನು ಒಪ್ಪಿಕೊಳ್ಳಬೇಕು, ಪ್ರಮುಖ ಖಾತೆಗಳನ್ನು ತಮಗೇ ನೀಡಬೇಕು ಎಂದು ಜೆಡಿಎಸ್ ಷರತ್ತು ಮುಂದಿಟ್ಟಿತ್ತು. ಈ ಷರತ್ತುಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಖಚಿತವಾಗಿ ಹೇಳಿದೆ.

ಗಣಿ ಮತ್ತು ಭೂಗರ್ಭ ಇಲಾಖೆ, ನಗರಾಭಿವೃದ್ಧಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಲಾಖೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಷರತ್ತು ಒಡ್ಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತನ್ನ ವಿರುದ್ಧ ಕೊಲೆ ಯತ್ನ ಕೇಸು ದಾಖಲಿಸಿದ್ದ ಬಿಜೆಪಿಯ ಮಾಜಿ ಸಚಿವ ಶ್ರೀರಾಮುಲು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದೂ ಒತ್ತಾಯಿಸಿದ್ದರೆಂದು ತಿಳಿದುಬಂದಿದೆ.

ಈ ಶರತ್ತುಗಳನ್ನು ಸ್ವಲ್ಪ ಬದಲಾಯಿಸಿದ ಬಳಿಕ ಸ್ವೀಕರಿಸುವುದಾಗಿ ಮತ್ತು ಈ ತಿಳಿವಳಿಕೆ ಪತ್ರಕ್ಕೆ ಉಭಯ ಪಕ್ಷಗಳ ನಾಯಕರು ಸಹಿ ಹಾಕಬೇಕೇ ಹೊರತು ಅವರ ಹೈಕಮಾಂಡ್‌ಗಳಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿರುವುದು ಜೆಡಿಎಸ್‌ಗೆ, ವಿಶೇಷವಾಗಿ ಅದರ ಹೈಕಮಾಂಡ್ ಆಗಿರುವ ದೇವೇಗೌಡರಿಗೆ ಪಥ್ಯವಾಗದ ವಿಷಯ.

ಇದೀಗ ಈ ಬಿಕ್ಕಟ್ಟು ಶಮನ ಕುರಿತು ಮಾತುಕತೆ ನಡೆಸಲು ಬಿಜೆಪಿ ಹೈಕಮಾಂಡು, ಪಕ್ಷದ ವರಿಷ್ಠ ನಾಯಕ ಯಶವಂತ ಸಿನ್ಹಾ ಅವರನ್ನು ಬೆಂಗಳೂರಿಗೆ ರವಾನಿಸಿದೆ.
ಮತ್ತಷ್ಟು
ಇಂದು ಸತ್ವ ಪರೀಕ್ಷೆ: ಜೆಡಿಎಸ್ ನಿಲುವು ಪ್ರಶ್ನಾರ್ಥಕ
ಎಒಯುಗೆ ಸಹಿ ಹಾಕಲೇಬೇಕು: ಜೆಡಿಎಸ್ ತಾಕೀತು
ಗೋಸಂತತಿ ಉಳಿವಿಗೆ ಕೋಟಿ ನೀರಾಜನ
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಆರಂಭ
ನಾಳೆ ಯಡಿಯೂರಪ್ಪ ವಿಶ್ವಾಸಮತ ಯಾಚನೆ
ಜೆಡಿಎಸ್ ಹೊಸ ಷರತ್ತು: ಸಿನ್ಹಾ ಬೆಂಗಳೂರಿಗೆ