ಒಪ್ಪಂದ ಪತ್ರಕ್ಕೆ ಸಹಿ ಹಾಕಬೇಕೆಂದು ದೇವೇಗೌಡರು ಬಿಜೆಪಿಗೆ ವಿಧಿಸಿದ್ದ ಸೋಮವಾರ ಬೆಳಗ್ಗಿನ 9 ಗಂಟೆಯ ಡೆಡ್‌ಲೈನ್ ಮುಗಿದಿದೆ. ಆದರೆ ಬಿಜೆಪಿಯ ಸಹಿ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗ್ಗೆ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ಸರಕಾರದ ವಿರುದ್ಧ ಮತ ಚಲಾಯಿಸಲು ವಿಪ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ರಾಜಕಾರಣದ ಮತ್ತೊಂದು ತಿರುವಿಗೆ ಕಾರಣವಾಗುವ, ರಾಷ್ಟ್ರೀಯ ನಾಯಕರ ಈ ನಿಲುವಿಗೆ ಜೆಡಿ(ಎಸ್) ವಲಯದಲ್ಲೇ ಅಪಸ್ವರ ಎದ್ದು ಬಂದಿದ್ದು, ದಳ ಮತ್ತೊಮ್ಮೆ ವಿದಳನೆಯಾಗಲಿದೆಯೇ ಎಂಬ ಶಂಕೆ ಮೂಡಿದೆ. ಒಂದೊಮ್ಮೆ ಬಿಜೆಪಿ ನೇತೃತ್ವದ ಸರಕಾರವು ಇಂದಿನ ವಿಶ್ವಾಸ ಮತದ ಸಂದರ್ಭ ಉರುಳಿಬಿದ್ದರೆ, ಜೆಡಿಎಸ್ ಹೋಳಾಗುವುದು ಖಚಿತವಾಗಿದೆ ಎಂದು ಮೂಲಗಳು ಅಂದಾಜಿಸಿವೆ.
ಇದಕ್ಕೆ ಪ್ರಧಾನ ಕಾರಣವೆಂದರೆ ಹೆಚ್ಚಿನ ಶಾಸಕರಿಗೆ ಮತ್ತೊಮ್ಮೆ ಚುನಾವಣೆ ಎದುರಿಸುವುದು ಬೇಕಿಲ್ಲ ಮತ್ತು ಕೆಲವರಿಗಂತೂ "ಬಿಜೆಪಿಗೆ ದ್ರೋಹ ಎಸಗಿದ ನಂತರ ಜನತೆಗೆ ಮುಖ ತೋರಿಸೋದಾದರೂ ಹೇಗೆ" ಎಂಬ ಚಿಂತೆ. ಈ ಕಾರಣಕ್ಕೆ ಪಕ್ಷದ ವರಿಷ್ಠರ ನಿಲುವು ಪಕ್ಷವನ್ನು ಒಡೆಯುವ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ರಾಜಕೀಯ ಪಂಡಿತರ ಲೆಕ್ಕಾಚಾರ.
ಜೆಡಿ(ಎಸ್) ವಲಯದಲ್ಲಿ ಬಹುತೇಕ ಶಾಸಕರು ಮಧ್ಯಂತರ ಚುನಾವಣೆ ಎದುರಿಸುವುದರ ವಿರುದ್ಧವಾಗಿದ್ದಾರೆ. ಆದರೆ ವಿಪ್ ಉಲ್ಲಂಘಿಸುವ ನೈತಿಕ ಧೈರ್ಯ ಸಹ ಜೆಡಿ(ಎಸ್) ಶಾಸಕಾಂಗ ಪಕ್ಷಕ್ಕಿಲ್ಲ. ಒಂದು ವೇಳೆ ವಿಪ್ ಉಲ್ಲಂಘನೆಯಾಗಿ ಸರ್ಕಾರದ ಪರವಾಗಿ ಮತ ಚಲಾಯಿಸುವುದೆಂದು ಕೆಲವಾರು ಶಾಸಕರು ನಿರ್ಧರಿಸಿದ್ದೇ ಆದರೆ ಜೆಡಿ(ಎಸ್) ಮತ್ತೊಮ್ಮೆ ಇಬ್ಭಾಗವಾಗುವ ಸಾಧ್ಯತೆಯಿದೆ.
|